Sanju Samson: ಸಂಜು ಸ್ಯಾಮ್ಸನ್ ಶತಕದ ಹಿಂದಿನ ಶಕ್ತಿ ಇವರೇ!
ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಭಾರತ, ಟಿ20 ಸರಣಿಯಲ್ಲೂ ಪ್ರಾಬಲ್ಯ ಮೆರೆದಿದೆ. ಶನಿವಾರ ನಡೆದ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 133 ರನ್‌ಗಳ ಬೃಹತ್ ಗೆಲುವು ಸಾಧಿಸಿ, 3-0 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಸಂಜು ಸ್ಯಾಮ್ಸನ್ ಅಮೋಘ ಶತಕದ ನೆರವಿನಿಂದ ಭಾರತ ದಾಖಲೆಯ 297 ರನ್‌ಗಳನ್ನು ಕಲೆಹಾಕಿತ್ತು.
ಕೇವಲ 47 ಎಸೆತಗಳಲ್ಲಿ 111 ರನ್ ಗಳಿಸಿದ ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಸತತ ವೈಫಲ್ಯದ ಬಳಿಕ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸುವ ಮೂಲಕ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ. ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದ ಬಳಿಕ, ಅವರ ಬದಲಾಗಿ ಬೇರೊಬ್ಬರಿಗೆ ಅವಕಾಶ ಕೊಡಬೇಕು ಎನ್ನುವ ಒತ್ತಾಯ ಕೇಳಿ ಬಂದಿತ್ತು, ಆದರೆ ಕೊನೆಯ ಪಂದ್ಯದಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಅದನ್ನು ಸದ್ಬಳಕೆ ಮಾಡಿಕೊಂಡರು.

ಸಂಜು ಸ್ಯಾಮ್ಸನ್ ಹೇಳಿದ್ದೇನು?
ಅಮೋಘ ಶತಕ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಅವರು, ನನ್ನ ಆಟದಿಂದ ತಂಡದ ಆಟಗಾರರು ಖುಷಿಯಾಗಿದ್ದು ನನಗೆ ಸಂತೋಷವಾಗಿದೆ. ಇಂದು ನಾನು ಚನ್ನಾಗಿ ಆಡಿದ್ದೇನೆ, ಹಿಂದಿನ ವೈಫಲ್ಯಗಳ ಬಗ್ಗೆ ಯೋಚಿಸಿದರೆ ಹತಾಶೆ ಉಂಟಾಗಬಹುದು, ಆದರೆ ನಾನು ಹೆಚ್ಚು ಉತ್ತಮವಾಗಿ ಆಡುತ್ತೇನೆ ಎಂದು ಯೋಜಿಸಿದೆ ಇಂದು ಅದು ಸಾಧ್ಯವಾಗಿದೆ ಎಂದು ಹೇಳಿದರು.
"ಈಗಾಗಲೇ ಹಲವು ಪಂದ್ಯಗಳನ್ನು ಆಡಿರುವುದರಿಂದ ಒತ್ತಡವನ್ನು ನಿಭಾಯಿಸುವ ಬಗ್ಗೆ ತಿಳಿದುಕೊಂಡಿದ್ದೇನೆ, ಸತತ ವೈಫಲ್ಯಗಳಿಂದ ಹೊರಬರುವುದು ಹೇಗೆನ್ನುವ ಬಗ್ಗೆ ಕೂಡ ತಿಳಿದಿದೆ. ನಾನು ಸಾಕಷ್ಟು ಬಾರಿ ವಿಫಲವಾಗಿದ್ದೇನೆ, ಆದರೆ ನನ್ನ ಕೆಲಸದ ಮೇಲೆ ಮಾತ್ರ ಗಮನ ಹರಿಸಿದೆ, ಇಂದು ಅದು ನನಗೆ ಫಲ ಕೊಟ್ಟಿದೆ" ಎಂದು ಹೇಳಿದರು.
"ದೇಶಕ್ಕಾಗಿ ಆಡುವಾಗ ಒತ್ತಡ ಇದ್ದೇ ಇರುತ್ತದೆ. ನಾನು ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ, ನನ್ನ ಸಾಮರ್ಥ್ಯ ಏನೆಂದು ತೋರಿಸಬೇಕಿದೆ. ಆದರೆ ನಾನು ವಿಷಯಗಳನ್ನು ಸರಳವಾಗಿ ಇಡಲು ಪ್ರಯತ್ನಿಸುತ್ತೇನೆ. ಒಂದು ಎಸೆತವನ್ನು ಎದುರಿಸುವ ಬಗ್ಗೆ ಮಾತ್ರ ನಾನು ಯೋಚಿಸುತ್ತಿದ್ದೆ" ಎಂದರು.
"ನಾಯಕ ಸೂರ್ಯಕುಮಾರ್ ಮತ್ತು ಕೋಚ್ ಗೌತಮ್ ಗಂಭೀರ್ ನನಗೆ ತುಂಬಾ ಬೆಂಬಲ ಕೊಟ್ಟರು. ಪ್ರೋತ್ಸಾಹದ ಮಾತುಗಳನ್ನು ಮಾತ್ರ ಆಡುವುದಲ್ಲ ಬದಲಾಗಿ, ನನಗೆ ಅವಕಾಶ ಕೊಟ್ಟು ಪ್ರೋತ್ಸಾಹ ಕೊಟ್ಟರು. ಕಳೆದ ಸರಣಿಯಲ್ಲಿ ಎರಡು ಬಾರಿ ಡಕೌಟ್ ಆಗಿದ್ದೆ, ಮುಂದೆ ಅವಕಾಶ ಸಿಗುತ್ತೋ ಇಲ್ಲವೋ ಎಂದು ಯೋಚಿಸುತ್ತಲೇ ಕೇರಳಕ್ಕೆ ಹೋಗಿದ್ದೆ, ಆದರೆ ಈಗ ಇಲ್ಲಿದ್ದೇನೆ" ಎಂದು ಹೇಳಿದರು.
ಸಂಜು ಸ್ಯಾಮ್ಸನ್ ಅವರು ಶತಕ ಸಿಡಿಸಿದ ಬಳಿಕ ಇನ್ನೂ ಹಲವು ಪಂದ್ಯಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಭಾರತ ತಂಡ ಮುಂದಿನ ಟಿ20 ಸರಣಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.












Click it and Unblock the Notifications