Rohit Sharma: ರೋಹಿತ್ ಶರ್ಮಾಗೆ ದೊಡ್ಡ ಗೌರವ; ವಾಂಖೆಡೆ ಕ್ರೀಡಾಂಗಣದಲ್ಲಿ ಅವರ ಹೆಸರಿನ ಸ್ಟಾಂಡ್ ಅನಾವರಣ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾಗೆ ದೊಡ್ಡ ಗೌರವ ಸಿಕ್ಕಿದೆ. ಭಾರತ ಕ್ರಿಕೆಟ್‌ಗೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿರುವ ಮುಂಬೈ ಕ್ರಿಕೆಟ್ ಮಂಡಳಿ ವಾಂಖೆಡೆ ಕ್ರೀಡಾಂಗಣದಲ್ಲಿ 'ರೋಹಿತ್ ಶರ್ಮಾ ಸ್ಟ್ಯಾಂಡ್' ಅನ್ನು ಸ್ಥಾಪಿಸಿದೆ. ಶುಕ್ರವಾರ ಅದರ ಉದ್ಘಾಟನೆ ಮತ್ತು ಅನಾವರಣ ಕಾರ್ಯಕ್ರಮ ನಡೆಯಿತು.
ರೋಹಿತ್ ಶರ್ಮಾ ಎಲ್ಲಾ ಸ್ವರೂಪಗಳಲ್ಲಿ ಭಾರತಕ್ಕೆ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ,
ಇತ್ತೀಚೆಗೆ ವಾಂಖೆಡೆಯಲ್ಲಿ ಸ್ಟ್ಯಾಂಡ್‌ಗೆ ಅವರ ಹೆಸರಿಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಶುಕ್ರವಾರ ಅದನ್ನು ಉದ್ಘಾಟನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ರೋಹಿತ್, ಅವರ ಪತ್ನಿ ರಿತಿಕಾ ಸಜ್ದೇ ಮತ್ತು ಅವರ ಪೋಷಕರು ಭಾಗವಹಿಸಿದ್ದರು. ಸ್ಟ್ಯಾಂಡ್ ಉದ್ಘಾಟನೆಯ ಸಮಯದಲ್ಲಿ ರೋಹಿತ್ ಅವರ ಪತ್ನಿ ರಿತಿಕಾ ಭಾವುಕರಾದರು.

ಶುಕ್ರವಾರ ಮಧ್ಯಾಹ್ನ, ಮುಂಬೈ ಇಂಡಿಯನ್ಸ್ (MI) ನ ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಯ ಸಮ್ಮುಖದಲ್ಲಿ, ರೋಹಿತ್ ಆಟವಾಡುತ್ತಾ ಬೆಳೆದ ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆಯೊಂದಿಗೆ ರೋಹಿತ್ ಅವರನ್ನು ಗೌರವಿಸಲಾಯಿತು.
ಪೋಷಕರಿಂದ ಉದ್ಘಾಟನೆ
ರೋಹಿತ್ ಅವರ ಪೋಷಕರು ಮತ್ತು ಪತ್ನಿಯನ್ನು ಸ್ಟ್ಯಾಂಡ್ ಉದ್ಘಾಟಿಸಲು ವೇದಿಕೆ ಮೇಲೆ ಕರೆಯಲಾಯಿತು. ರೋಹಿತ್ ಅವರ ಪೋಷಕರು ಒಟ್ಟಾಗಿ ಬಜರ್ ಒತ್ತುವ ಮೂಲಕ ಸ್ಟ್ಯಾಂಡ್ ಉದ್ಘಾಟನೆ ನೆರವೇರಿಸಿದರು. ರೋಹಿತ್ ಮತ್ತು ಅವರ ಪತ್ನಿ ರಿತಿಕಾ ಪಕ್ಕದಲ್ಲಿ ನಿಂತಿದ್ದರು. ಸಮಾರಂಭ ನಡೆಯುತ್ತಿದ್ದಂತೆ ರೋಹಿತ್ ಮತ್ತು ಅವರ ಪತ್ನಿ ರಿತಿಕಾ ಭಾವುಕರಾಗಿದ್ದರು.
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಕೆಲವೇ ದಿನಗಳ ನಂತರ ಅವರ ಹೆಸರಿನ ಸ್ಟಾಂಡ್ ಉದ್ಘಾಟನೆ ಮಾಡಲಾಗಿದೆ. ರೋಹಿತ್ ಅವರನ್ನು ಸಾರ್ವಕಾಲಿಕ ಅತ್ಯುತ್ತಮ ವೈಟ್-ಬಾಲ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಏಕದಿನ ಪಂದ್ಯಗಳಲ್ಲಿ, ಅವರು 11,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, 32 ಶತಕಗಳನ್ನು ಬಾರಿಸಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ಸಾಧನೆ ಮಾಡಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ರೋಹಿತ್ ಹೊಂದಿದ್ದಾರೆ ಮತ್ತು ಈ ಸ್ವರೂಪದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಹೊಂದಿದ್ದಾರೆ. 37 ವರ್ಷದ ರೋಹಿತ್ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುತ್ತಿದ್ದು, ಒಂದು ವಾರ ಸ್ಥಗಿತದ ನಂತರ ಐಪಿಎಲ್ ಆರಂಭವಾಗಿದ್ದು ಮುಂದಿನ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಪಾಯಿಂಟ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಇನ್ನು ಎರಡು ಪಂದ್ಯಗಳಲ್ಲಿ ಗೆದ್ದರೆ ಪ್ಲೇಆಫ್ ಸ್ಥಾನ ಖಚಿತವಾಗಲಿದೆ.












Click it and Unblock the Notifications