Renuka Singh: ಆರ್‌ಸಿಬಿಯಲ್ಲಿ ಆಡಲ್ಲ ಎಂದಿದ್ದೆ: ಮಾನಸಿಕ ಒತ್ತಡದ ಬಗ್ಗೆ ಮಹತ್ವದ ಮಾಹಿತಿ ಬಿಚ್ಚಿಟ್ಟ ರೇಣುಕಾ ಸಿಂಗ್ ಠಾಕೂರ್
Renuka Singh: ಡಬ್ಲ್ಯೂಪಿಎಲ್ 2027 ಆರಂಭಕ್ಕೂ ಮುನ್ನ ಆರ್‌ಸಿಬಿ ಮಾಜಿ ಸ್ಟಾರ್ ಬೌಲರ್ ರೇಣುಕಾ ಸಿಂಗ್ ಠಾಕೂರ್ ಅವರು ಮಹತ್ವದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಆರಂಭಿಕ ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಆಡುವಾಗ ಎದುರಿಸಿದ ತೀವ್ರ ಒತ್ತಡ ಹಾಗೂ ತಂಡದಿಂದ ಹೊರನಡೆಯಲು ಯೋಚಿಸಿದ್ದ ಘಟನೆಯನ್ನು ಭಾರತದ ವೇಗಿ ರೇಣುಕಾ ಸಿಂಗ್ ಠಾಕೂರ್ ಬಹಿರಂಗಪಡಿಸಿದ್ದಾರೆ. ಬೃಹತ್ ಮೊತ್ತ ₹1.50 ಕೋಟಿ ಬೆಲೆ ನೀಡಿ ತಮ್ಮನ್ನು ಖರೀದಿಸಿದ್ದ ಹಾಗೂ ಮೈದಾನದಲ್ಲಿನ ಸತತ ಕಳಪೆ ಪ್ರದರ್ಶನ ತಮ್ಮ ಮೇಲೆ ಭಾರಿ ಮಾನಸಿಕ ಒತ್ತಡ ಹೇರಿತ್ತು ಎಂದು ಅವರು ತಿಳಿಸಿದ್ದಾರೆ.

1.50 ಕೋಟಿ ರೂಪಾಯಿಗೆ ಖರೀದಿಸಿದ್ದ ಆರ್‌ಸಿಬಿ
ಡಬ್ಲ್ಯೂಪಿಎಲ್‌ನ ಚೊಚ್ಚಲ ಆರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೇಣುಕಾ ಸಿಂಗ್ ಅವರನ್ನು 1.50 ಕೋಟಿ ರೂಪಾಯಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಮೊದಲ ಸೀಸನ್‌ನಲ್ಲಿ 6 ಪಂದ್ಯಗಳನ್ನು ಆಡಿದ ರೇಣುಕಾ, ಹೆಚ್ಚು ರನ್ ನೀಡಿ ದುಬಾರಿಯಾಗಿದ್ದಲ್ಲದೆ, ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.
ತಮ್ಮ ಮೇಲಿದ್ದ ಒತ್ತಡದ ಕುರಿತು ಮಾತನಾಡಿದ ರೇಣುಕಾ
'ನಾನು ನನ್ನ ವೃತ್ತಿಜೀವನದಲ್ಲಿ ಅಷ್ಟು ದೊಡ್ಡ ಮೊತ್ತದ ಹಣವನ್ನು ಎಂದೂ ಕಂಡಿರಲಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಆರ್‌ಸಿಬಿ ಇಷ್ಟೊಂದು ಹಣ ವ್ಯಯಿಸಿದೆ, ಆದರೆ ನನ್ನಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲವಲ್ಲ,' ಎಂಬ ಯೋಚನೆ ನಿರಂತರವಾಗಿ ಕಾಡುತ್ತಿತ್ತು. ಒಂದೆಡೆ ತಂಡವು ಪಂದ್ಯಗಳನ್ನು ಸೋಲುತ್ತಿತ್ತು, ಇನ್ನೊಂದೆಡೆ ನಮಗೂ ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿರಲಿಲ್ಲ,' ಎಂದು ಹೇಳಿದ್ದಾರೆ.
ತಂಡ ತೊರೆಯುವ ನಿರ್ಧಾರ ಹಾಗೂ ಸ್ಮೃತಿ ಬೆಂಬಲ ನೆನೆದ ರೇಣುಕಾ
ಸತತ ವೈಫಲ್ಯಗಳಿಂದ ಕಂಗೆಟ್ಟ ರೇಣುಕಾ ಸಿಂಗ್ ಠಾಕೂರ್, ನಾಯಕಿ ಸ್ಮೃತಿ ಮಂಧನಾ ಅವರ ಬಳಿ ತೆರಳಿ ತಮಗೆ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. 'ನಾನು ಸ್ಮೃತಿ ಬಳಿ ಹೋಗಿ, ನನ್ನಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ, ಇನ್ಮುಂದೆ ಆಡುವುದಿಲ್ಲ,' ಎಂದು ಹೇಳಿದೆ ಎಂದರು.
'ತಕ್ಷಣವೇ ಸ್ಮೃತಿ ನನ್ನಿಂದಲೂ ರನ್ ಗಳಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಉತ್ತರಿಸಿದರು. ಆ ಸೀಸನ್‌ನಲ್ಲಿ ಸ್ಮೃತಿ ಮಂಧನಾ ಕೂಡ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸುತ್ತಿದ್ದರು. ಆದರೆ ಅವರು ತಂಡದಲ್ಲಿ ಧನಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು,' ಎಂದು ರೇಣುಕಾ ಸಿಂಗ್ ಅವರು ನೆನಪಿಸಿಕೊಂಡಿದ್ದಾರೆ.
ಗುಜರಾತ್ ಜೈಂಟ್ಸ್ ಸೇರಿದ ರೇಣುಕಾ ಸಿಂಗ್
ಆರ್‌ಸಿಬಿ ತಂಡದಲ್ಲಿ ಒಟ್ಟು 3 ಸೀಸನ್‌ಗಳಲ್ಲಿ 23 ಪಂದ್ಯಗಳನ್ನಾಡಿದ ರೇಣುಕಾ 13 ವಿಕೆಟ್‌ಗಳನ್ನು ಕಬಳಿಸಿದರು. ನಂತರ 2026ರ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು ಬಿಡುಗಡೆ ಮಾಡಿತು. ಬಳಿಕ ಗುಜರಾತ್ ಜೈಂಟ್ಸ್ ತಂಡವು ಅವರನ್ನು ₹60 ಲಕ್ಷಕ್ಕೆ ಖರೀದಿಸಿತು.
ಬೆಂಗಳೂರು ಫ್ರಾಂಚೈಸಿ ಹಾಗೂ ಗುಜರಾತ್ ತಂಡದ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ ಅವರು, 'ಆರ್‌ಸಿಬಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹೀಗಾಗಿ ಅಲ್ಲಿ ಆಡುವಾಗ ಹೆಚ್ಚು ಒತ್ತಡವಿರುತ್ತದೆ. ಸತತ ಎರಡು ಸೀಸನ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದಾಗ ಅಭಿಮಾನಿಗಳ ನಿರೀಕ್ಷೆಯನ್ನು ತಲುಪಲಾಗದೆ ಮಾನಸಿಕವಾಗಿ ಕುಗ್ಗುವುದು ಸಹಜ. ಆದರೆ ಗುಜರಾತ್ ಜೈಂಟ್ಸ್‌ನಲ್ಲೂ ತಂಡದ ವಾತಾವರಣ ಉತ್ತಮವಾಗಿದೆ. ಅಂತಿಮವಾಗಿ ನಾವು ಯಾವ ತಂಡಕ್ಕೆ ಆಡುತ್ತೇವೆ ಎಂಬುದಕ್ಕಿಂತ ಮೈದಾನದಲ್ಲಿ ಹೇಗೆ ಪ್ರದರ್ಶನ ನೀಡುತ್ತೇವೆ ಎಂಬುದು ಮುಖ್ಯ,' ಎಂದು ರೇಣುಕಾ ಸಿಂಗ್ ಹೇಳಿದ್ದಾರೆ. ಒಟ್ಟಿನಲ್ಲಿ ಇವರ ಈ ಹೇಳಿಕೆ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದಂತೂ ನಿಜ.


Click it and Unblock the Notifications
