ಪಾಕಿಸ್ತಾನದಿಂದ ದಿನಕ್ಕೊಂದು ನೆಪ: ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ ತಡವಾಗ್ತಿರೋದ್ಯಾಕೆ?
ಏಷ್ಯಾಕಪ್ ಪಂದ್ಯಾವಳಿ ಆಯೋಜನೆಗಾಗಿ ದಿನಕ್ಕೊಂದು ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಭಾರತದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕೂಡ ಅಡ್ಡಗಾಲು ಹಾಕುತ್ತಿದೆ. ಕಳೆದ ವಾರವೇ ಏಕದಿನ ವಿಶ್ವಕಪ್ ವೇಳಾಪಟ್ಟಿ ನಡೆಯಬೇಕಿತ್ತಾದರೂ, ಪಾಕಿಸ್ತಾನದ ಕೊಂಕಿನಿಂದ ಬಿಡುಗಡೆ ಮುಂದೆ ಹೋಗಿದೆ.
ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಪಂದ್ಯಾವಳಿ ನಡೆಯಲಿದ್ದು, ಬಿಸಿಸಿಐ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ ಬಿಸಿಸಿಐ ಕಳುಹಿಸಿದ ಕರಡು ವೇಳಾಪಟ್ಟಿಗೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದೆ, ಪಾಕಿಸ್ತಾನದ ಎರಡು ಪಂದ್ಯಗಳ ಸ್ಥಳಗಳನ್ನು ಬದಲಾವಣೆ ಮಾಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮನವಿ ಮಾಡಿರುವುದಕ್ಕೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಪಾಕಿಸ್ತಾನದ ಧೋರಣೆ ವಿರುದ್ಧ ಅಸಮಾಧಾನ ಕೂಡ ವ್ಯಕ್ತಪಡಿಸಿದೆ. ದಿನಕ್ಕೊಂದು ನೆಪ ಹೇಳುತ್ತಾ, ವೇಳಾಪಟ್ಟಿ ಬಿಡುಗಡೆಗೂ ಅಡ್ಡಗಾಲು ಹಾಕಿದೆ.
ಪಾಕಿಸ್ತಾನದ ಸಮಸ್ಯೆ ಏನು?
ಬಿಸಿಸಿಐ ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ, "ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏನು ಬೇಕಾದರೂ ಹೇಳಬಹುದು. ಆದರೆ ವೇಳಾಪಟ್ಟಿ ವಿಳಂಬವಾಗಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಾರಣ. ಪಾಕಿಸ್ತಾನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲು ಸಿದ್ದರಿಲ್ಲ, ಈಗ ಅವರು ಚೆನ್ನೈನಲ್ಲಿ ಕೂಡ ಆಡಲು ಸಿದ್ದವಾಗಿಲ್ಲ. ಅವರಿಗೆ ಅಭದ್ರತೆಯ ಭಯ ಕಾಡುತ್ತಿದೆ" ಎಂದು ಹೇಳಿದ್ದಾರೆ.
ಕರಡು ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ಪ್ರೊಫೈಲ್ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ. ಆದರೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಾನು ಪಂದ್ಯವನ್ನಾಡುವುದಿಲ್ಲ ಎಂದು ಹೇಳಿದೆ. ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಸೇರಿದಂತೆ ಹಲವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಶಾಹಿದ್ ಅಫ್ರಿದಿಯನ್ನು ಕೆರಳಿಸಿತ್ತು, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡದಿರುವ ನಿರ್ಧಾರಕ್ಕೆ ಪಿಸಿಬಿಯನ್ನು ತರಾಟೆಗೆ ತೆಗೆದುಕೊಂಡರು. ಅಹಮದಾಬಾದ್ ಪಿಚ್‌ಗಳು ಪಾಕಿಸ್ತಾನದ ಆಟಗಾರರ ಮೇಲೆ ಯಾವುದೇ ಭೂತಗಳನ್ನು ಹೊಂದಿಲ್ಲ ಎಂದು ಹರಿಹಾಯ್ದರು.
ಚೆನ್ನೈನಲ್ಲಿ ಆಡಲು ಹಿಂಜರಿಕೆ ಏಕೆ?
ಚೆನ್ನೈನಲ್ಲಿ ಸ್ಪಿನ್ ಸ್ನೇಹಿ ಪಿಚ್ ಹೊಂದಿದ್ದು, ಇಲ್ಲಿ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಪಂದ್ಯ ನಡೆಯಲಿದೆ. ಚೆನ್ನೈ ಸ್ಪಿನ್ ಸ್ನೇಹಿ ಪಿಚ್ ಆಗಿರುವುದರಿಂದ ಇಲ್ಲಿ ಅಫ್ಘಾನಿಸ್ತಾನದ ವಿರುದ್ಧ ಪಂದ್ಯವನ್ನಾಡಲ್ಲ ಎಂದು ಪಾಕಿಸ್ತಾನ ಹೊಸ ತಗಾದೆ ತೆಗೆದಿದೆ. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಬೇಕು ಎಂದು ಒತ್ತಾಯ ಮಾಡುತ್ತಿದೆ.
ಏಕದಿನ ವಿಶ್ವಕಪ್‌ನ ಅಧಿಕೃತ ವೇಳಾಪಟ್ಟಿಯನ್ನು ಮುಂಬರುವ ವಾರದಲ್ಲಿ ಐಸಿಸಿ ಪ್ರಕಟಿಸಬಹುದು. ಪಂದ್ಯಾವಳಿಯು ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಸಾಧ್ಯತೆ ಇದೆ, ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಆತಿಥೇಯ ಭಾರತವು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳು ನವೆಂಬರ್ 15 ಮತ್ತು 16 ರಂದು ನಡೆಯಲಿದ್ದು, ಫೈನಲ್ ನವೆಂಬರ್ 19ರಂದು ನಡೆಯಲಿದೆ.












Click it and Unblock the Notifications