RCB vs CSK: ಸಿಎಸ್‌ಕೆಗೆ ಮುಳುವಾದ ಯಶ್ ದಯಾಳ್ ಆರ್‌ಸಿಬಿಗೆ ರಣರೋಚಕ ಗೆಲುವು; ಪ್ಲೇಆಫ್ ಸ್ಥಾನ ಖಚಿತ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ 2 ರನ್‌ಗಳ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಈ ಭಾರಿ ಐಪಿಎಲ್‌ನಲ್ಲಿ ಬಹುತೇಕ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿದೆ.
ಟಾಸ್ ಗೆದ್ದ ಸಿಎಸ್‌ಕೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ ಕಳೆದುಕೊಂಡು 213 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಫಿಲ್ ಸಾಲ್ಟ್ ಫಿಟ್ ಆಗಿಲ್ಲದ ಕಾರಣ ಅವಕಾಶ ಪಡೆದ ಜೇಕಬ್ ಬೆಥೆಲ್ ಅರ್ಧಶತಕ ಬಾರಿಸುವ ಮೂಲಕ ಮಿಂಚಿದರು. ವಿರಾಟ್ ಕೊಹ್ಲಿ ಮತ್ತು ಬೆಥೆಲ್ ಅತ್ಯುತ್ತಮ ಆರಂಭ ಒದಗಿಸಿದರು.

9.5 ಓವರ್ ಗಳಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ 97 ರನ್ ಕಲೆಹಾಕಿದರು. ಜೇಕಬ್ ಬೆಥೆಲ್ 33 ಎಸೆತಗಳಲ್ಲಿ 55 ರನ್ ಗಳಿಸಿ ಮಿಂಚಿದರು. ವಿರಾಟ್ ಕೊಹ್ಲಿ 33 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ 62 ರನ್ ಗಳಿಸಿ ಮಿಂಚಿದರು. ಬಳಿಕ ಬಂದ ದೇವದತ್ ಪಡಿಕ್ಕಲ್, ರಜತ್ ಪಟಿದಾರ್, ಜಿತೇಶ್ ಶರ್ಮಾ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದು ತಂಡದ ದೊಡ್ಡ ಸ್ಕೋರ್ ಗಳಿಸುವ ಅವಕಾಶ ಕೈಚೆಲ್ಲಿದರು.
ಅಬ್ಬರಿಸಿದ ರೊಮಾರಿಯೋ ಶೆಫರ್ಡ್
ಆದರೆ ಕೊನೆಯ 14 ಎಸೆತಗಳಿರುವಾಗ ಬ್ಯಾಟಿಂಗ್‌ಗೆ ಬಂದ ರೊಮಾರಿಯೋ ಶೆಫರ್ಡ್ ಪಂದ್ಯದ ತಿರುವನ್ನೇ ಬದಲಾಯಿಸಿದರು. ಕೊನೆಯ 14 ಎಸೆತಗಳಲ್ಲಿ 4 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 54 ರನ್ ಗಳಿಸಿ ಆರ್ ಸಿಬಿ 213 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು.
ಸಿಎಸ್‌ಕೆ ಭರ್ಜರಿ ಆರಂಭ
214 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯಿತು. ಆಯುಶ್ ಮ್ಹಾತ್ರೆ ಮತ್ತು ಶೇಖ್ ರಶೀದ್ ಮೊದಲ ವಿಕೆಟ್‌ಗೆ 4.3 ಓವರ್ ಗಳಲ್ಲಿ 51 ರನ್ ಗಳಿಸಿದರು. ಶೇಕ್ ರಶೀದ್ 14 ರನ್ ಗಳಿಸಿ ಔಟಾದರು. ಬಳಿಕ ಬಂದ ಸ್ಯಾಮ್ ಕರನ್ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಆದರೆ ಆಯುಶ್ ಮ್ಹಾತ್ರೆ ಅಮೋಘ ಇನ್ನಿಂಗ್ಸ್ ಮೂಲಕ ಸಿಎಸ್‌ಕೆಗೆ ಗೆಲುವಿನ ಭರವಸೆ ಮೂಡಿಸಿದರು. ರವೀಂದ್ರ ಜಡೇಜಾ ಮತ್ತು ಆಯುಶ್ ಮ್ಹಾತ್ರೆ 114 ರನ್‌ಗಳ ಜೊತೆಯಾಟ ಆಡಿದರು. ಒಂದು ಹಂತದಲ್ಲಿ ಸಿಎಸ್‌ಕೆ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು.
ಆದರೆ ಲುಂಗಿ ಎಂಗಿಡಿ ಒಂದೇ ಓವರ್ ನಲ್ಲಿ ಆಯುಶ್ ಮ್ಹಾತ್ರೆ ಮತ್ತು ಡೆವಾಲ್ಡ್ ಬ್ರೆವಿಸ್ ಅವರ ವಿಕೆಟ್ ಪಡೆಯುವ ಮೂಲಕ ಸಿಎಸ್‌ಕೆಗೆ ಆಘಾತ ನೀಡಿದರು. ಬಳಿಕ ಬೌಲಿಂಗ್ ಮಾಡಿದ ಸುಯಾಶ್ ಶರ್ಮಾ ಕೇವಲ 6 ರನ್ ನೀಡುವ ಮೂಲಕ ಸಿಎಸ್‌ಕೆ ಮೇಲೆ ಒತ್ತಡ ಹೇರಿದರು. 19ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಅವಕಾಶ ಸೃಷ್ಟಿಸಿದರೂ ಕೊಹ್ಲಿ ಕ್ಯಾಚ್ ಬಿಟ್ಟರು. ಭುವಿ 19ನೇ ಓವರ್ ನಲ್ಲಿ 14 ರನ್ ಬಿಟ್ಟುಕೊಟ್ಟರು.
ಯಶ್ ದಯಾಳ್ ಮ್ಯಾಜಿಕ್
ಕೊನೆಯ ಓವರ್ ನಲ್ಲಿ ಸಿಎಸ್‌ಕೆ ಗೆಲುವಿಗೆ 15 ರನ್ ಬೇಕಿತ್ತು, ಯಶ್ ದಯಾಳ್ ಮತ್ತೊಮ್ಮೆ ಆರ್ ಸಿಬಿಗೆ ಹೀರೋ ಆದರು. ಕಳೆದ ವರ್ಷ ಇದೇ ಸಿಎಸ್‌ಕೆ ವಿರುದ್ಧ ಕೊನೆಯ ಓವರ್ ನಲ್ಲಿ ಧೋನಿ ವಿಕೆಟ್ ಪಡೆದು ಮ್ಯಾಚ್ ಗೆಲ್ಲಿಸಿದ್ದ ಯಶ್ ದಯಾಳ್ ಮತ್ತೊಮ್ಮೆ ಧೋನಿ ಅವರ ವಿಕೆಟ್ ಪಡೆದರು ಪಂದ್ಯವನ್ನು ತಿರುಗಿಸಿದರು. ಆದರೆ ಮುಂದಿನ ಎಸೆತದಲ್ಲೇ ಶಿವಂ ದುಬೆ ಸಿಕ್ಸರ್ ಬಾರಿಸಿದರು. ಇದು ನೋ ಬಾಲ್ ಆಗಿತ್ತು, ಬಳಿಕ ಕೊನೆಯ 3 ಎಸೆತಗಳಲ್ಲಿ ಸಿಎಸ್‌ಕೆ ಗೆಲುವಿಗೆ 6 ರನ್ ಬೇಕಿದ್ದಾಗ. ಮೂರು ಎಸೆತಗಳಲ್ಲೂ ಕೇವಲ ಒಂದೊಂದು ರನ್ ಬಿಟ್ಟುಕೊಟ್ಟ ದಯಾಳ್ ಆರ್ ಸಿಬಿಗೆ 2 ರನ್‌ಗಳ ರೋಚಕ ಗೆಲುವು ತಂದುಕೊಟ್ಟರು.












Click it and Unblock the Notifications