RCB vs DC: ಆರ್‌ಸಿಬಿ ಮುಂದಿನ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್; ಹೇಗಿದೆ ರಣತಂತ್ರ?
ಐಪಿಎಲ್ 2025ರ ಆವೃತ್ತಿಯಲ್ಲಿ ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತೆ ತವರಿನಿಂದ ಹೊರಗೆ ಪಂದ್ಯ ಆಡಲು ಸಜ್ಜಾಗಿದೆ. ಈವರೆಗೆ ತವರಿನಿಂದ ಹೊರಗೆ ಆಡಿರುವ ಎಲ್ಲಾ ಐದು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಿರುವು ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ತವರಿನಿಂದ ಹೊರಗೆ ಬಲಿಷ್ಠ ತಂಡಗಳನ್ನೇ ಮಟ್ಟ ಹಾಕಿರುವ ಆರ್ ಸಿಬಿ ಭಾನುವಾರ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 27ರಂದು ಭಾನುವಾರ ಸಂಜೆ 7.30ಕ್ಕೆ ಈ ಪಂದ್ಯ ನಡೆಯಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ.

ಅದೊಂದು ಲೆಕ್ಕ ಬಾಕಿ ಇದೆ!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್ ಸಿಬಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು, ಕರ್ನಾಟಕದ ಆಟಗಾರ ಕೆಎಲ್ ರಾಹುಲ್ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಗೆಲುವು ತಂದುಕೊಟ್ಟಿದ್ದರು. ಗೆಲುವಿನ ಬಳಿಕ ಕೆಎಲ್ ರಾಹುಲ್ ಸಂಭ್ರಮಾಚರಣೆ ಮಾಡಿದ್ದು ಸಾಕಷ್ಟು ಗಮನ ಸೆಳೆದಿತ್ತು.
ಗೆಲುವಿನ ರನ್ ಗಳಿಸಿದ ಬಳಿಕ ಕೆಎಲ್ ರಾಹುಲ್ ಬ್ಯಾಟ್‌ನಿಂದ ವೃತ್ತ ಬರೆದು ಇದು ನನ್ನ ಅಂಗಳ ಎಂದು ಸನ್ನೆ ಮಾಡಿದ್ದರು. ಇದೀಗ ಆರ್ ಸಿಬಿ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಇದು ವಿರಾಟ್ ಕೊಹ್ಲಿ ಅವರ ತವರಿನ ಅಂಗಳವಾಗಿದ್ದು ಬೆಂಗಳೂರಿನ ಸೋಲಿನ ಲೆಕ್ಕವನ್ನು ದೆಹಲಿಯಲ್ಲಿ ಗೆದ್ದು ತೀರಿಸುವ ಲೆಕ್ಕಾಚಾರದಲ್ಲಿದೆ.
ಆರ್ ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಲಯ ಕಂಡುಕೊಂಡಿದೆ. ದೇವದತ್ ಪಡಿಕ್ಕಲ್ ಪ್ರತಿ ಪಂದ್ಯದಲ್ಲಿ ರನ್ ಗಳಿಸುತ್ತಿರುವುದು ತಂಡದ ಬ್ಯಾಟಿಂಗ್‌ಗೆ ಹೆಚ್ಚಿನ ಶಕ್ತಿ ತಂದಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವ ಪಂದ್ಯವನ್ನು ಆರ್ ಸಿಬಿ ಬೌಲರ್ ಗಳು ಗೆಲ್ಲಿಸಿಕೊಟ್ಟಿದ್ದು ತಂಡದ ಬೌಲಿಂಗ್ ವಿಭಾಗದ ಆತ್ಮವಿಶ್ವಾಸ ಹೆಚ್ಚಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವಿನ ಬಳಿಕ ತವರಿಗೆ ಮರಳಿದ್ದು, ಆರ್ ಸಿಬಿ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಎರಡೂ ತಂಡಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಪಡೆಯೇ ಇದ್ದು ಹೈಸ್ಕೋರಿಂಗ್ ಪಂದ್ಯವಾಗುವ ಸಾಧ್ಯತೆ ಇದೆ. ಎರಡೂ ತಂಡಗಳು ಗೆಲುವಿನ ಲಯದಲ್ಲಿರುವ ಕಾರಣ ಮುಂದಿನ ಪಂದ್ಯದಲ್ಲಿ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಉಭಯ ತಂಡಗಳ ಆಡುವ ಬಳಗ
ಆರ್ ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್.
ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ದುಷ್ಮಂತ ಚಮೀರಾ, ಮುಖೇಶ್ ಕುಮಾರ್.












Click it and Unblock the Notifications