RCB vs LSG: ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದರೆ ಆರ್ಸಿಬಿಗೆ ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ
ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇ ಆಫ್ ತಲುಪು ತಂಡಗಳು ಯಾವುವು ಎಂದು ತಿಳಿಯಲು ಸಾಕಷ್ಟು ಕಾಯಬೇಕಾಯಿತು. ಲೀಗ್ ಹಂತದ ಎರಡು ಪಂದ್ಯಗಳಷ್ಟೆ ಬಾಕಿ ಇದ್ದು, ಈಗಾಗಲೇ ಮೂರು ತಂಡಗಳು ಪ್ಲೇ ಆಫ್ ತಲುಪಿದ್ದು, ಒಂದು ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪೈಪೋಟಿ ನಡೆಸುತ್ತಿವೆ.
ಶನಿವಾರ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಒಂದು ರನ್ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಪ್ಲೇ ಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಇನ್ನು ಮಧ್ಯಾಹ್ನ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 77 ರನ್‌ಗಳ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶಿಸಿದೆ.

ಭಾನುವಾರ ಎರಡು ಪಂದ್ಯಗಳು ನಡೆಯಲಿದ್ದು, ನಾಲ್ಕನೆಯ ತಂಡವಾಗಿ ಪ್ಲೇ ಆಫ್ ಪ್ರವೇಶಿಸುವ ತಂಡ ಯಾವುದು ನಿರ್ಧಾರವಾಗಲಿದೆ. ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದರೂ ಅದು ಪ್ಲೇ ಆಫ್ ಪ್ರವೇಶಿಸುವುದು ಆರ್ ಸಿಬಿ Vs ಗುಜರಾತ್ ಟೈಟಾನ್ಸ್ ಪಂದ್ಯದ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿದರೆ ಮುಂಬೈ ಇಂಡಿಯನ್ಸ್ ಹೊರಗುಳಿಯಲಿದ್ದು ಆರ್ ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ.
ಮುಂಬೈ ಹೈದರಾಬಾದ್ ವಿರುದ್ದ ಸೋತು, ಆರ್ ಸಿಬಿ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಮಳೆಯಿಂದ ರದ್ದಾದರೂ ಆರ್ ಸಿಬಿ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದೆ. ಪಂದ್ಯ ನಡೆದರೆ ಮಾತ್ರ ಆರ್ ಸಿಬಿ ಗೆಲುವು ಸಾಧಿಸಬೇಕಾಗುತ್ತದೆ.
ಪ್ಲೇ ಆಫ್‌ನಲ್ಲಿ ಸೂಪರ್ ಜೈಂಟ್ಸ್ ಎದುರಾಳಿ
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶಿಸಿದರೆ, ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಇನ್ನು ಈ ಸುದ್ದಿ ಕೇಳಿಯೇ ಅಭಿಮಾನಿಗಳು ರೋಮಾಂಚಿತರಾಗಿದ್ದಾರೆ. ಎಲಿಮಿನೇಟರ್ ಪಂದ್ಯ ಇವರಿಬ್ಬರ ನಡುವೆಯೇ ನಡೆಯಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಈ ಬಾರಿ ಐಪಿಎಲ್‌ನಲ್ಲಿ ಸಖತ್ ಸದ್ದು ಮಾಡಿದ ಪಂದ್ಯಗಳಲ್ಲಿ ಆರ್ ಸಿಬಿ Vs ಎಲ್‌ಎಸ್‌ಜಿ ನಡುವಿನ ಎರಡೂ ಪಂದ್ಯಗಳು ಪ್ರಮುಖವಾಗಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎಲ್‌ಎಸ್‌ಜಿ ಒಂದು ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಗೆದ್ದ ಬಳಿಕ ಎಲ್‌ಎಸ್‌ಜಿ ತಂಡದ ಆಟಗಾರ ಆವೇಶ್ ಖಾನ್ ಹೆಲ್ಮೆಟ್ ಬಿಸಾಕಿ ಸಂಭ್ರಮಿಸಿದ್ದರೆ, ಮೆಂಟರ್ ಗೌತಮ್ ಗಂಭೀರ್ ಆರ್ ಸಿಬಿ ಅಭಿಮಾನಿಗಳು ಬಾಯಿ ಮುಚ್ಚುವಂತೆ ಸನ್ನೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಲಕ್ನೋದಲ್ಲಿ ನಡೆದ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು18 ರನ್‌ಗಳಿಂದ ಗೆದ್ದಿತ್ತು. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಜೊತೆ ಎಲ್‌ಎಸ್‌ಜಿ ಬೌಲರ್ ನವೀನ್ ಉಲ್ ಹಕ್ ಮತ್ತು ಗೌತಮ್ ಗಂಭೀರ್ ನಡುವೆ ಕಿರಿಕ್ ಆಗಿತ್ತು. ಇಷ್ಟಕ್ಕೆ ಸುಮ್ಮನಾಗದ ನವೀನ್ ಉಲ್ ಹಕ್ ತಮ್ಮ ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ಹಲವು ಬಾರಿ ಕೊಹ್ಲಿಯನ್ನು ಕೆಣಕಿದ್ದಾರೆ. ಇದೆಲ್ಲದನ್ನು ಗಮನಿಸಿರುವ ಅಭಿಮಾನಿಗಳು ಎರಡೂ ತಂಡಗಳು ಪ್ಲೇ ಆಫ್‌ನಲ್ಲಿ ಆಡಿದರೆ ಭಾರಿ ಪೈಪೋಟಿ ಇರುತ್ತದೆ ಎಂದು ಕಾಯುತ್ತಿದ್ದಾರೆ.












Click it and Unblock the Notifications