IPL 2025 RCB vs KKR: ಆರ್‌ಸಿಬಿ vs ಕೆಕೆಆರ್ ಮೊದಲ ಪಂದ್ಯ ನಡೆಯೋದೆ ಅನುಮಾನ! ಕಾರಣವೇನು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 22ರಂದು ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ವಿರುದ್ಧ ಸೆಣೆಸಲಿದೆ. ಮೊದಲ ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪಂದ್ಯ ಆರಂಭಕ್ಕೆ ಮುನ್ನ ಅದ್ದೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ದಿಶಾ ಪಟಾನಿ ಮತ್ತು ಶ್ರೇಯಸ್ ಘೋಷಾಲ್ ಸೇರಿದಂತೆ ಅನೇಕ ಖ್ಯಾತ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಈಗಾಗಲೇ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಇಡೀ ಕ್ರೀಡಾಂಗಣ ತುಂಬಲಿದೆ. ಆದರೆ ಐಪಿಎಲ್ 2025ರ ಮೊದಲ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ.

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಇದೀಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರದಿಂದ ಭಾನುವಾರದವರೆಗೆ ದಕ್ಷಿಣ ಬಂಗಾಳಕ್ಕೆ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಿದೆ. ಮಾರ್ಚ್ 22ರಂದು ಶನಿವಾರ ಅಂದರೆ ಐಪಿಎಲ್ ಪಂದ್ಯದ ದಿನವೇ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಅಲರ್ಟ್ ಘೋಷಿಸಿದೆ.
ಆಕ್ಯುವೆದರ್ ಮುನ್ಸೂಚನೆ ಪ್ರಕಾರ ಶನಿವಾರ ಕೋಲ್ಕತಾದಲ್ಲಿ ಮಳೆಯಾಗುವ ಸಾಧ್ಯತೆ 74% ರಷ್ಟಿದೆ. 97% ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ 90% ಇರಲಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಪಂದ್ಯದ ಆರಂಭದ ವೇಳೆಗೆ ಮಳೆ ಜೋರಾಗುವ ಸಾಧ್ಯತೆ ಇದ್ದು, ಪಂದ್ಯ ನಡೆಯುವುದರ ಮೇಲೆ ಆತಂಕ ಮೂಡಿಸಿದೆ.
ಒಂದು ಪಂದ್ಯ ಸ್ಥಳಾಂತರ
ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಒಂದು ಪಂದ್ಯವನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಏಪ್ರಿಲ್ 6ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೋಲ್ಕತಾ ನೈಟ್ ರೈಡರ್ಸ್‌ನ ತವರು ಪಂದ್ಯವನ್ನು ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ಅಂದು ರಾಮನವಮಿ ಇರುವ ಕಾರಣ ಐಪಿಎಲ್ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸುವುದು ಸಾಧ್ಯವಿಲ್ಲ ಎಂದು ಕೋಲ್ಕತಾ ಪೋಲೀಸರು ಹೇಳಿರುವ ಕಾರಣ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಪಿಟಿಐಗೆ ತಿಳಿಸಿದ್ದಾರೆ.
"ಪಂದ್ಯವನ್ನು ಮರು ನಿಗದಿಪಡಿಸುವಂತೆ ನಾವು ಬಿಸಿಸಿಐಗೆ ತಿಳಿಸಿದ್ದೇವೆ, ಆದರೆ ಪಂದ್ಯದ ದಿನಾಂಕ ಬದಲಾವಣೆ ಸಾಧ್ಯವಿಲ್ಲದ ಕಾರಣ, ಗುವಾಹಟಿಗೆ ಸ್ಥಳಾಂತರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ ಎಂದು. ಸ್ನೇಹಶಿಶ್ ಗಂಗೂಲಿ ಹೇಳಿದ್ದಾರೆ.












Click it and Unblock the Notifications