RCB Vs GT: ವಿಲ್ ಜ್ಯಾಕ್ಸ್, ವಿರಾಟ್ ಕೊಹ್ಲಿ ಅಬ್ಬರಕ್ಕೆ ಶರಣಾದ ಗುಜರಾತ್ ಟೈಟಾನ್ಸ್
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಮತ್ತು ವಿಲ್ ಜ್ಯಾಕ್ಸ್ ಅವರ ಅಬ್ಬರಕ್ಕೆ ಗುಜರಾತ್ ಟೈಟಾನ್ಸ್ ಬೆಚ್ಚಿ ಬಿದ್ದಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಆರ್ ಸಿಬಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು. ನಾಯಕ ಶುಭಮನ್ ಗಿಲ್ 16, ವೃದ್ಧಿಮಾನ್ ಸಾಹ 5 ರನ್ ಗಳಿಸಿ ಔಟಾದರು.

ಸಾಯಿ ಸುದರ್ಶನ್ 49 ಎಸೆತಗಳಲ್ಲಿ ಅಜೇಯ 84 ರನ್ ಗಳಿಸುವ ಮೂಲಕ ತಂಡವನ್ನು ದೊಡ್ಡ ಮೊತ್ತ ಕಲೆಹಾಕಲು ಕಾರಣವಾದರು. ಶಾರೂಖ್ ಖಾನ್ 30 ಎಸೆತಗಳಲ್ಲಿ 58 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ 26 ರನ್ ಗಳಿಸಿದರು.
ವಿಲ್ ಜ್ಯಾಕ್ಸ್, ಕೊಹ್ಲಿ ಅಬ್ಬರ
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಆರ್ ಸಿಬಿ ಉತ್ತಮ ಆರಂಭವನ್ನು ಪಡೆಯಿತು. ನಾಯಕ ಫಾಫ್ ಡುಪ್ಲೆಸಿಸ್ 12 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಸಹಿತ 70 ರನ್ ಗಳಿಸಿದರು.
ವಿಲ್ ಜ್ಯಾಕ್ಸ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಷರಶಃ ಅಬ್ಬರಿಸಿದರು. ಮೊದಲ 16 ಎಸೆತಗಳಲ್ಲಿ ಕೇವಲ 16 ರನ್ ಮಾತ್ರ ಗಳಿಸಿದ್ದ ವಿಲ್ ಜ್ಯಾಕ್ಸ್ ನಂತರ ಬೌಲರ್ ಗಳನ್ನು ತರಾಟೆಗೆ ತೆಗೆದುಕೊಂಡರು. 25 ಎಸೆತಗಳಲ್ಲಿ 84 ರನ್ ಗಳಿಸಿ ಮಿಂಚಿದರು.
ಮೋಹಿತ್ ಶರ್ಮಾ ಅವರ ಒಂದೇ ಓವರ್ ನಲ್ಲಿ 29 ರನ್ ಗಳಿಸಿ ಮಿಂಚಿದ ವಿಲ್ ಜ್ಯಾಕ್ಸ್ ಬಳಿಕ ರಶೀದ್ ಖಾನ್ ಅವರ ಓವರ್ ನಲ್ಲೂ 29 ರನ್ ಗಳಿಸಿದರು. ಅಂತಿಮವಾಗಿ 41 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದ ವಿಲ್ ಜ್ಯಾಕ್ಸ್ ಅಮೋಘ ಗೆಲುವು ತಂದುಕೊಟ್ಟರು. ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 10 ಭರ್ಜರಿ ಸಿಕ್ಸರ್ ಸೇರಿವೆ.
16 ಓವರ್ ಗಳಲ್ಲಿ 206 ರನ್ ಗಳಿಸಿದ ಆರ್ ಸಿಬಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆಡಿರುವ 10 ಪಂದ್ಯಗಳಲ್ಲಿ 3ನೇ ಪಂದ್ಯವನ್ನು ಗೆದ್ದ ಆರ್ ಸಿಬಿ 6 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ. ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ ಆರ್ ಸಿಬಿ.












Click it and Unblock the Notifications