RCB Vs GT: ಆರ್‌ಸಿಬಿ ತಂಡಕ್ಕೆ ಮತ್ತೊಮ್ಮೆ ಗುಜರಾತ್ ಎದುರಾಳಿ; ಬೆಂಗಳೂರಿನಲ್ಲಿ ಹೈವೋಲ್ಟೇಜ್ ಪಂದ್ಯ
ಐಪಿಎಲ್ 2024ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಆರಂಭದಲ್ಲಿ ಅಂದುಕೊಂಡಂತೆ ಪ್ರದರ್ಶನ ನೀಡದೇ ಇದ್ದರೂ, ಕಳೆದ ಮೂರು ಪಂದ್ಯಗಳಲ್ಲಿ ಲಯ ಕಂಡುಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಫಾಫ್ ಡುಪ್ಲೆಸಿಸ್ ಪಡೆ ಮತ್ತೊಮ್ಮೆ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣೆಸಲು ಸಜ್ಜಾಗುತ್ತಿದೆ.
ಏಪ್ರಿಲ್ 4 (ಶನಿವಾರ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಎರಡೂ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆರ್ ಸಿಬಿ ಇನ್ನೂ ಸಂಪೂರ್ಣವಾಗಿ ಪ್ಲೇ ಆಫ್ ಕನಸನ್ನು ಕೈಬಿಟ್ಟಿಲ್ಲ, ಗುಜರಾತ್ ಟೈಟಾನ್ಸ್ ಕೂಡ ಪ್ಲೇ ಆಫ್ ತಲುಪಲು ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿದ್ದ ಗುಜರಾತ್ ಟೈಟಾನ್ಸ್ ಬಳಿಕ ಫೈನಲ್ ತಲುಪಿತ್ತು. ಆದರೆ ಈ ಬಾರಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಬ್ಯಾಟರ್ ಗಳು ಅಂದುಕೊಂಡಂತೆ ಪ್ರದರ್ಶನ ನೀಡದೇ ಇರುವುದು, ಬೌಲರ್ ಕೂಡ ಕೈಕೊಟ್ಟಿರುವುದು ನಾಯಕ ಗಿಲ್‌ಗೆ ತಲೆನೋವಾಗಿದೆ.
ಉತ್ತಮ ಲಯದಲ್ಲಿದೆ ಆರ್ ಸಿಬಿ
ನಿಧಾನವಾಗಿಯಾದರೂ ಆರ್‌ಸಿಬಿ ಬ್ಯಾಟರ್ ಗಳು ಫಾರ್ಮ್‌ಗೆ ಮರಳಿದ್ದಾರೆ. ವಿಲ್ ಜ್ಯಾಕ್ಸ್, ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಅಬ್ಬರಿಸಿದ್ದರು. ಬೆಂಗಳೂರಿನಲ್ಲಿ ಕೂಡ ಅದೇ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಕೂಡ ಸುಧಾರಣೆಯಾಗಿದ್ದು, ಕರಣ್ ಶರ್ಮಾ ಮತ್ತು ಸ್ವಪ್ನಿಲ್ ಸಿಂಗ್ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಶಕ್ತಿ ತಂದಿದ್ದಾರೆ. ಮ್ಯಾಕ್ಸ್‌ವೆಲ್ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು, ಶನಿವಾರ ಕೂಡ ಅವರು ಆಡಲಿದ್ದು, ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಬರಲಿದೆ.
ಪಿಚ್ ವರದಿ
ಶನಿವಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಚಿನ್ನಸ್ವಾಮಿಯಲ್ಲಿ ಪಿಚ್ ಬ್ಯಾಟರ್ ಗಳಿಗೆ ನೆರವಾಗುವ ಸಾಧ್ಯತೆ ಹೆಚ್ಚಿದ್ದು, ಮತ್ತೊಂದು ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ. ವಿಲ್ ಜ್ಯಾಕ್ಸ್, ಡುಪ್ಲೆಸಿಸ್, ಕೊಹ್ಲಿ ಜೊತೆ ಮ್ಯಾಕ್ಸ್‌ವೆಲ್ ಅಬ್ಬರಿಸಿದರೆ ಆರ್ ಸಿಬಿ ಸುಲಭ ಗೆಲುವು ಸಾಧಿಸಬಹುದು.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸ್ವಪ್ನಿಲ್ ಸಿಂಗ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್.
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಬ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ನೂರ್ ಅಹ್ಮದ್, ಮೋಹಿತ್ ಶರ್ಮಾ.












Click it and Unblock the Notifications