RCB: ಗಾಯದ ಆತಂಕ ದೂರ; ಆರ್‌ಸಿಬಿ ಸೇರಿಕೊಂಡ ಸ್ಫೋಟಕ ಆಲ್‌ರೌಂಡರ್!
ಐಪಿಎಲ್ 2025ರ ಆರಂಭಕ್ಕೆ ಇನ್ನು ಒಂದು ವಾರವಷ್ಟೇ ಬಾಕಿಯಿದ್ದು ಎಲ್ಲಾ ತಂಡಗಳು ಈಗಾಗಲೇ ಅಭ್ಯಾಸ ಆರಂಭಿಸಿವೆ. ಆರ್ ಸಿಬಿ ತಂಡದ ಬಹುತೇಕ ಆಟಗಾರರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ಇದೀಗ ತಂಡದ ಯುವ ಆಟಗಾರ, ಸ್ಪೋಟಕ ಆಲ್‌ರೌಂಡರ್ ಆರ್ ಸಿಬಿ ಸೇರಿಕೊಂಡಿದ್ದಾರೆ.
ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದು ತಂಡವನ್ನು ಸೇರಿಕೊಂಡಿದ್ದಾರೆ. ಅವರು ಗಾಯಗೊಂಡಿದ್ದು ಈ ಬಾರಿ ಐಪಿಎಲ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು, ಆದರೆ ಬೆಥೆಲ್ ಫಿಟ್ ಆಗಿದ್ದು ಬೆಂಗಳೂರಿಗೆ ಬಂದಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಗಾಯದ ಸಮಸ್ಯೆಯಿಂದ ಭಾರತದ ವಿರುದ್ಧ ಏಕದಿನ ಸರಣಿ, ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದ ಜೇಕಬ್ ಬೆಥೆಲ್ ಇದೀಗ ಊಹಾಪೋಹಕ್ಕೆ ಅಂತ್ಯ ಹಾಡಿದ್ದಾರೆ. ಮಾರ್ಚ್ 22ರಂದು ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಆರಂಭಿಕ ಪಂದ್ಯಕ್ಕೆ ಜೇಕಬ್ ಬೆಥೆಲ್ ಲಭ್ಯವಾಗಿದ್ದಾರೆ.
ಆದಾಗ್ಯೂ, RCB ಈಗ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದೆ, ಹಾಲಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಋತುವಿನ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ಬೆಥೆಲ್ ಬೆಂಗಳೂರಿಗೆ ಆಗಮನವನ್ನು ದೃಢಪಡಿಸಿದೆ.
ಇಂಗ್ಲೆಂಡ್‌ನ ಭರವಸೆಯ ಆಟಗಾರ
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜೇಕಬ್ ಬೆಥೆಲ್ ಕಡಿಮೆ ಸಮಯದಲ್ಲಿ ಇಂಗ್ಲೆಂಡ್ ತಂಡದಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಎಡಗೈ ಬ್ಯಾಟರ್ ಮಧ್ಯಮ ಕ್ರಮಾಂಕದಲ್ಲಿ, ಫಿನಿಷರ್ ಸ್ಥಾನದಲ್ಲಿ ಮಿಂಚಿದ್ದಾರೆ.
ಇದುವರೆಗೆ ಆಡಿರುವ 10 ಟಿ20 ಪಂದ್ಯಗಳಲ್ಲಿ, ಅವರು ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 32.66 ಸರಾಸರಿ ಮತ್ತು 147.36 ಸ್ಟ್ರೈಕ್ ರೇಟ್‌ನಲ್ಲಿ 196 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಅರ್ಧಶತಕಗಳಿವೆ. ಅವರ ಅತ್ಯುತ್ತಮ ಸ್ಕೋರ್ 62*. ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಅವರು ಹೆಚ್ಚಿನ ರನ್ ಗಳಿಸದೇ ಇದ್ದರೂ ಐಪಿಎಲ್‌ನಲ್ಲಿ ಫಾರ್ಮ್ ಕಂಡುಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಬೆಥೆಲ್ 63 ಪಂದ್ಯಗಳು ಮತ್ತು 57 ಇನ್ನಿಂಗ್ಸ್‌ಗಳಲ್ಲಿ 24.50 ಸರಾಸರಿ ಮತ್ತು 136.77 ಸ್ಟ್ರೈಕ್ ರೇಟ್‌ನಲ್ಲಿ 1,127 ರನ್ ಗಳಿಸಿದ್ದಾರೆ, ಇದರಲ್ಲಿ ಏಳು ಅರ್ಧಶತಕಗಳಿವೆ. ಸ್ಪಿನ್ ಬೌಲಿಂಗ್‌ನೊಂದಿಗೆ 26.90 ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂಬತ್ತು ಏಕದಿನ ಪಂದ್ಯಗಳಲ್ಲಿ, ಅವರು ಎಂಟು ಇನ್ನಿಂಗ್ಸ್‌ಗಳಲ್ಲಿ 31.14 ಸರಾಸರಿಯಲ್ಲಿ 218 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಅರ್ಧಶತಕಗಳು ಮತ್ತು 55 ರ ಅತ್ಯುತ್ತಮ ಸ್ಕೋರ್ ಸೇರಿವೆ.
ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಮುಗಿದ ಬಳಿಕ ಕೆಲವು ದಿನ ಬ್ರೇಕ್ ತೆಗೆದುಕೊಂಡ ಅವರು ತಂಡವನ್ನು ಸೇರಿಕೊಂಡಿದ್ದು ಅಭ್ಯಾಸ ಆರಂಭಿಸಲಿದ್ದಾರೆ.
ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?
ಆರ್ ಸಿಬಿ ಸೇರಿಕೊಂಡ ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದರು. ನಾನು ಇನ್ನಷ್ಟು ದಿನ ಕ್ರಿಕೆಟ್ ಆಡಬೇಕಿದೆ, ಈಗಲೇ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ನಿವೃತ್ತಿ ವದಂತಿಗಳಿಗೆ ತೆರೆ ಎಳೆದರು. ಮತ್ತೆ ಅಂತಾರಾಷ್ಟ್ರಿಯ ಟಿ20 ಕ್ರಿಕೆಟ್‌ಗೆ ಮರಳುವ ಸಾಧ್ಯತೆಯನ್ನು ತಳ್ಳಿ ಹಾಕಿದ ಅವರು, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಒಂದು ಪಂದ್ಯ ಆಡಬೇಕೆಂದರೆ ಮಾತ್ರ ನಾನು ವಾಪಸ್ ಬಂದು ಆಡುತ್ತೇನೆ ಎನ್ನುವ ಮೂಲಕ ತಮಾಷೆಯ ಉತ್ತರ ಕೊಟ್ಟರು.
ನಾನು ಅಗ್ರೆಸಿವ್ ಆಗಿದ್ದಾಗ ಶಾಂತವಾಗಿರಿ ಎನ್ನುತ್ತಿದ್ದರು ಈಗ ಮೈದಾನದಲ್ಲಿ ಶಾಂತಿಯಿಂದ ಇದ್ದರೆ ಅಗ್ರೆಸಿವ್ ಆಗಿರಿ ಎನ್ನುತ್ತಾರೆ. ಹೇಗಿರಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ. ಕೊಹ್ಲಿ ತಂಡವನ್ನು ಸೇರಿಕೊಂಡಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಜೋಶ್ ಹೇಜಲ್‌ವುಡ್ ಗಾಯದ ಸಮಸ್ಯೆ
ತಂಡದ ಪ್ರಮುಖ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಗಾಯಗೊಂಡಿರುವುದು ಇದೀಗ ಆರ್ ಸಿಬಿ ಚಿಂತೆಯನ್ನು ಹೆಚ್ಚಿಸಿದೆ. ಹೇಜಲ್‌ವುಡ್ ಇನ್ನೂ ಫಿಟ್ ಆಗದ ಕಾರಣ ಅವರು ಐಪಿಎಲ್‌ನಲ್ಲಿ ಆಡುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇಡೀ ಪಂದ್ಯಾವಳಿಗೆ ಅವರು ಅಲಭ್ಯ ಎಂದಾದರೆ ಆರ್ ಸಿಬಿ ಅವರಿಗೆ ಬದಲೀ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಹೆಚ್ಚಿದ ಅಭಿಮಾನಿಗಳ ನಿರೀಕ್ಷೆ
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮೊದಲ ದಿನ ಪ್ರಮುಖ ಆಟಗಾರರನ್ನು ಕೊಳ್ಳದೆ ಸುಮ್ಮನಿದ್ದ ಆರ್ ಸಿಬಿ ವಿರುದ್ಧ ಅಭಿಮಾನಿಗಳು ಕಿಡಿ ಕಾರಿದ್ದರು. ಆದರೆ ಎರಡನೇ ದಿನ ಪ್ರಮುಖ ಆಟಗಾರರನ್ನು ಖರೀದಿ ಮಾಡುವ ಮೂಲಕ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ.
ಲಿಯಾಮ್ ಲಿವಿಂಗ್‌ಸ್ಟೋನ್, ಜೇಕಬ್ ಬೆಥೆಲ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಜತ್ ಪಟಿದಾರ್ ಅವರಿಗೆ ಬ್ಯಾಟಿಂಗ್‌ನಲ್ಲಿ ಜೊತೆಯಾಗಲಿದ್ದಾರೆ. ಕನ್ನಡಿಗರಾದ ದೇವದತ್ ಪಡಿಕ್ಕಲ್ ಮತ್ತು ಮನೋಜ್ ಭಾಂಡಗೆ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಭುವನೇಶ್ವರ್ ಕುಮಾರ್, ಯಶ್ ದಯಾಳ್, ನುವಾನ್ ತುಷಾರ, ಸ್ವಪ್ನಿಲ್ ಸಿಂಗ್ ತಂಡದ ಪ್ರಮುಖ ಬೌಲಿಂಗ್ ಶಕ್ತಿಯಾಗಲಿದ್ದಾರೆ. ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಎಲ್ಲಾ ಆಟಗಾರರು ಲಯ ಕಂಡುಕೊಂಡರೆ ಆರ್ ಸಿಬಿ ಬಲಿಷ್ಠ ತಂಡವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಮಾರ್ಚ್ 22ರಂದು ಶನಿವಾರ ನಡೆಯಲಿರುವ ಮೊದಲ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
2025ರ ಐಪಿಎಲ್‌ಗೆ ಆರ್ ಸಿಬಿ ತಂಡ:
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ , ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ, ಸ್ವಪ್ನಿಲ್ ಸಿಂಗ್, ರೊಮಾರಿಯೋ ಶೆಫರ್ಡ್, ಮೋಹಿತ್ ರಾಥೀ, ಸುಯಶ್ ಶರ್ಮಾ, ಅಭಿನಂದನ್ ಸಿಂಗ್, ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಸಿಖ್ ಸಲಾಂ, ನುವಾನ್ ತುಷಾರ, ಲುಂಗಿ ಎನ್‌ಗಿಡಿ.












Click it and Unblock the Notifications