RCB: ಐಪಿಎಲ್ ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದು ನಿರ್ಧಾರದ ವಿರುದ್ಧ ರೊಚ್ಚಿಗೆದ್ದ ಆರ್‌ಸಿಬಿ ಮೆಂಟರ್ DK
RCB: ಐಪಿಎಲ್‌ನಲ್ಲಿ ಆಟಗಾರರಿಗೆ ತುಂಬಾ ಸಹಾಯಕ ಆಗುತ್ತಿರುವುದೆಂದರೆ ಅದು ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಇದೀಗ ಇದನ್ನು ರದ್ದುಪಡಿಸುವ ವಿಚಾರ ಮುನ್ನಲೆಗೆ ಬಂದಿದ್ದು, ಈ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಐಪಿಎಲ್‌ನಲ್ಲಿ ಜಾರಿಯಲ್ಲಿರುವ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು 2027ರ ಐಪಿಎಲ್ ಸೀಸನ್ ಮೊದಲೇ ರದ್ದುಗೊಳಿಸುವುದು ಸರಿಯಲ್ಲ ಎಂದು ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ದಿನೇಶ್ ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ಅರ್ಧದಲ್ಲೇ ನಿಯಮ ಬದಲಾವಣೆ ಸೂಕ್ತವಲ್ಲ
ಸಂದರ್ಶನವೊಂದರಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್ ಅವರು, 'ಐಪಿಎಲ್‌ನಲ್ಲಿ ಯಾವುದೇ ಹೊಸ ನಿಯಮವನ್ನು ಜಾರಿಗೆ ತರುವುದಿದ್ದರೆ ಅದನ್ನು ಮೆಗಾ ಹರಾಜಿನ ಆರಂಭದಲ್ಲೇ ತರಬೇಕು. ಅದೇ ರೀತಿ ಆ ನಿಯಮವನ್ನು ಕೈಬಿಡಬೇಕಾದರೆ 3 ವರ್ಷಗಳ ಬಳಿಕ ರದ್ದುಗೊಳಿಸಬೇಕು. ಪ್ರಸ್ತುತ ಇದೀಗ ಈ ನಿಯಮವನ್ನು ರದ್ದುಗೊಳಿಸುವುದು ಅಥವಾ ಬದಲಾಯಿಸುವುದು ಸರಿಯಲ್ಲ,' ಎಂದು ಹೇಳಿದ್ದಾರೆ.
ತಂಡಗಳ ಆಯ್ಕೆ ಮತ್ತು ಸಮತೋಲನದ ಮೇಲೆ ಪರಿಣಾಮ
'ಪ್ರತಿಯೊಂದು ಫ್ರಾಂಚೈಸಿಯು ಹರಾಜಿನಲ್ಲಿ ಆಟಗಾರರನ್ನು ಆಯ್ಕೆ ಮಾಡುವಾಗ 12 ಜನ ಆಟಗಾರರನ್ನು (ಇಂಪ್ಯಾಕ್ಟ್ ಪ್ಲೇಯರ್ ಸೇರಿ) ಗಮದಲ್ಲಿಟ್ಟುಕೊಂಡು ತಂಡವನ್ನು ಕಟ್ಟಲಾಗುತ್ತದೆ. ಈಗ ಏಕಾಏಕಿ ನಿಯಮವನ್ನು ತೆಗೆದುಹಾಕಿ ಕೇವಲ 11 ಆಟಗಾರರಿಗೆ ಸೀಮಿತಗೊಳಿಸಿದರೆ, ಅದು ಕೆಲವು ತಂಡಗಳಿಗೆ ಅನಾನುಕೂಲವನ್ನು ಉಂಟುಮಾಡಬಹುದು. 2027ರ ಸೀಸನ್ ಮುಗಿದ ಬಳಿಕ ಬೇಕಾದ್ರೆ ಈ ನಿಯಮವನ್ನು ತೆಗೆದುಹಾಕಿ,' ಎಂದು ಹೇಳಿದ್ದಾರೆ.
'ಆರಂಭದಲ್ಲಿ ಈ ನಿಯಮವು ಪಂದ್ಯಗಳಿಗೆ ಉತ್ತಮ ರೋಚಕತೆಯನ್ನು ನೀಡಿತ್ತು ಮತ್ತು ಹೆಚ್ಚಿನ ರನ್‌ಗಳ ಕಾದಾಟಕ್ಕೆ ಕಾರಣವಾಗಿತ್ತು. ಆದರೆ ಇತ್ತೀಚಿನ ಸೀಸನ್‌ಗಳಲ್ಲಿ ತನ್ನ ಹಳೆಯ ಆಕರ್ಷಣೆ ಹಾಗೂ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆ. ಅಲ್ಲದೆ, ಪ್ರತಿಯೊಂದು ಪಂದ್ಯದಲ್ಲೂ ಹೆಚ್ಚುವರಿ ಬ್ಯಾಟರ್ ಅಥವಾ ಬೌಲರ್ ಬಳಸಲು ಅವಕಾಶವಿರುವುದರಿಂದ ಭಾರತೀಯ ಕ್ರಿಕೆಟ್‌ಗೆ ಗುಣಮಟ್ಟದ ಆಲ್‌ರೌಂಡರ್‌ಗಳನ್ನು ರೂಪಿಸುವಲ್ಲಿ ಇದು ಹಿನ್ನಡೆ ಉಂಟುಮಾಡಬಹುದು,' ಅಂತಲೂ ಅವರು ಒಪ್ಪಿಕೊಂಡಿದ್ದಾರೆ.
'ಆರಂಭದಲ್ಲಿದ್ದ ಉತ್ಸಾಹ ಈಗ ಕಮ್ಮಿಯಾಗಿದ್ದು, ಪ್ರೇಕ್ಷಕರು ಹಾಗೂ ಆಟಗಾರರಿಗೂ ಇದರ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಆದರೂ ನಿಯಮಾವಳಿಗಳ ಸ್ಥಿರತೆ ಮತ್ತು ಹರಾಜಿನಲ್ಲಿ ತಂಡಗಳು ಮಾಡಿರುವ ಯೋಜನೆಯನ್ನು ಗೌರವಿಸುವ ನಿಟ್ಟಿನಲ್ಲಿ 2027ರ ಸೀಸನ್ ಮುಗಿಯುವವರೆಗೆ ಈ ನಿಯಮವನ್ನು ಮುಂದುವರಿಸುವುದೇ ಉಳ್ಳೆಯದು,' ಎಂದು ದಿನೇಶ್ ಕಾರ್ತಿಕ್ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications
