RCB: ಆರ್‌ಸಿಬಿ ಅಭಿಮಾನಿಗಳು ಬೆಸ್ಟ್; ಸಿಎಸ್‌ಕೆ ಬೌಲರ್ ರವಿಚಂದ್ರನ್ ಅಶ್ವಿನ್ ಹೇಳಿದ್ದೇನು?
ಐಪಿಎಲ್ 2025ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆಡಿರುವ 5 ಪಂದ್ಯಗಳಲ್ಲಿ 1 ಪಂದ್ಯ ಮಾತ್ರ ಗೆದ್ದಿದ್ದು ಸತತವಾಗಿ 4 ಪಂದ್ಯಗಳಲ್ಲಿ ಸೋಲು ಕಂಡಿದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ಸತತವಾಗಿ ಸೋಲು ಕಾಣುತ್ತಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಿಎಸ್‌ಕೆ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಟೀಕೆ ಮಾಡುತ್ತಿದ್ದು, ಕೆಲವರು ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಂಡದ ಪ್ರಮುಖ ಬೌಲರ್ ರವಿಚಂದ್ರನ್ ಅಶ್ವಿನ್ ತಮ್ಮ ಯೂಟೂಬ್ ಚಾನಲ್‌ನಲ್ಲಿ ಐಪಿಎಲ್ ಪಂದ್ಯಾವಳಿಯ ಈವರೆಗೆ ನಡೆದ ಪಂದ್ಯಗಳ ಬಗ್ಗೆ ಮಾತನಾಡಿದ್ದಾರೆ. ಸಿಎಸ್‌ಕೆ ತಂಡಕ್ಕೆ ತಡವಾಗಿ ಎಲ್ಲಾ ಕೂಡಿ ಬರುತ್ತಿದೆ, ಆಟದಲ್ಲಿ ಸೋಲು ಗೆಲುವು ಸಹಜ ಗೆಲುವಿನ ಹಳಿಗೆ ಮರಳುವ ವಿಶ್ವಾಸವಿದೆ ಎಂದಿದ್ದಾರೆ.

ಟೀಕೆ ಮಾಡಿ ಆದರೆ ನಿಂದನೆ ಯಾಕೆ?
ಟೀಕೆಗಳ ಬಗ್ಗೆ ಕೂಡ ಮಾತನಾಡಿರುವ ಅವರು, ನಮ್ಮನ್ನು ಪ್ರೀತಿಸುವ ಅಭಿಮಾನಿಗಳೇ ಉತ್ತಮವಾಗಿ ಆಡದೇ ಇದ್ದಾಗ ಟೀಕೆ ಮಾಡುವುದು ಸಹಜ. ಆದರೆ ಇಲ್ಲಿ ಕೆಲವು ವೈಯಕ್ತಿಕವಾಗಿ ನಿಂದನೆ ಮಾಡುತ್ತಿದ್ದಾರೆ, ವಿಷ ಕಾರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆರ್ ಸಿಬಿ ಅಭಿಮಾನಿಗಳ ಬಗ್ಗೆ ಮಾತನಾಡಿರುವ ಅವರು, ದಿನೇಶ್ ಕಾರ್ತಿಕ್ ಅವರ ಸಂದರ್ಶನದ ವೇಳೆ ಅವರು, ಆರ್ ಸಿಬಿ ಅಭಿಮಾನಿಗಳು ಎಷ್ಟು ಗ್ರೇಟ್ ಎನ್ನುವುದನ್ನು ಹೇಳಿದ್ದರು. ಆರ್ ಸಿಬಿ ಎಷ್ಟು ಬಾರಿ ಸೋತರೂ ಅವರ ಅಭಿಮಾನಿಗಳು ಆಟಗಾರರನ್ನು, ತಂಡವನ್ನು ಬೇರೆಯವರ ಮುಂದೆ ಬಿಟ್ಟುಕೊಡುವುದಿಲ್ಲ, ಅಂತಹ ಅಭಿಮಾನಿಗಳನ್ನು ಪಡೆಯುವುದು ಪುಣ್ಯ ಎಂದಿದ್ದಾರೆ.
ತಂಡ ಸತತವಾಗಿ ಸೋಲುತ್ತಿದ್ದಾಗ ಆಟಗಾರರಿಗೆ ಬೇಸರವಾಗುವುದು ಸಹಜ. ನಾನೂ ತುಂಬ ಬೇಸರದಲ್ಲಿದ್ದೇನೆ, ಆಟದ ಬಗ್ಗೆ ಟೀಕೆ ಮಾಡುವುದು ಕೂಡ ಸಹಜ. 90ರ ದಶಕದಲ್ಲಿ ಭಾರತ ತಂಡ ಸೋತಾಗ ಆಟಗಾರರ ಪ್ರತಿಕೃತಿ ಸುಡುತ್ತಿದ್ದರು, ಆಟಗಾರರ ಮನೆಗೂ ಕಲ್ಲು ಹೊಡೆಯುತ್ತಿದ್ದರು. ಈಗ ಅದು ಸೋಷಿಯಲ್ ಮೀಡಿಯಾಗೆ ಶಿಫ್ಟ್ ಆಗಿದೆ. ಟೀಕೆಗಳನ್ನು ಮಾಡುವುದಕ್ಕೆ ಬೇಸರವಿಲ್ಲ, ಆದರೂ ಕೆಲವರು ದ್ವೇಷ ಕಾರುತ್ತಾರೆ ಅದು ಮನಸ್ಸಿಗೆ ಬೇಸರ ತರುತ್ತದೆ ಎಂದು ಹೇಳಿದ್ದಾರೆ.
ಆರ್ ಅಶ್ವಿನ್ ಹೇಳಿಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಕೆಲವು ಸಿಎಸ್‌ಕೆ ಅಭಿಮಾನಿಗಳು ಅಶ್ವಿನ್ ವಿರುದ್ಧ ಕೋಪಗೊಂಡಿದ್ದು, ಆರ್ ಸಿಬಿ ಅಭಿಮಾನಿಗಳನ್ನು ಹೊಗಳುವುದನ್ನು ಬಿಡಿ, ಉತ್ತಮ ಪ್ರದರ್ಶನ ನೀಡುವ ಕಡೆ ಗಮನ ಕೊಡಿ, ಇಲ್ಲವಾದರೆ ನಿವೃತ್ತಿ ಪಡೆದು ಮನೆಗೆ ಹೋಗಿ ಎನ್ನುವಂತೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.












Click it and Unblock the Notifications