Rajat Patidar: ನಾಯಕನಾಗಿ ಅಬ್ಬರಿಸುತ್ತಿರುವ ಆರ್‌ಸಿಬಿ ಸ್ಫೋಟಕ ಬ್ಯಾಟರ್
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಅತ್ಯುತ್ತಮ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಇದಕ್ಕೂ ಮುನ್ನ ಆರ್ ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್ ದಯಾಳ್‌ರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು.
ನಾಯಕ ಫಾಫ್ ಡುಪ್ಲೆಸಿಸ್‌ರನ್ನು ಬಿಡುಗಡೆ ಮಾಡಿದ್ದರಿಂದ ಮುಂದಿನ ಐಪಿಎಲ್‌ನಲ್ಲಿ ತಂಡದ ನಾಯಕನ್ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ವಿರಾಟ್ ಕೊಹ್ಲಿ ನಾಯಕನ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಕೊಹ್ಲಿ ನಾಯಕನಾಗಲು ಒಪ್ಪದೇ ಇದ್ದರೆ, ಪರ್ಯಾಯ ಆಯ್ಕೆಗಳತ್ತ ಆರ್ ಸಿಬಿ ನೋಡಲಿದೆ.

ರಜತ್ ಪಟಿದಾರ್ ಆರ್ ಸಿಬಿ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಐಪಿಎಲ್‌ಗೆ ಮುನ್ನವೇ ಅವರಿಗೆ ನಾಯಕತ್ವ ಒಲಿದಿದೆ. ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಮಧ್ಯಪ್ರದೇಶ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ನಾಯಕನಾಗಿ ಬ್ಯಾಟಿಂಗ್‌ನಲ್ಲಿ ಕೂಡ ಅಬ್ಬರಿಸುತ್ತಿದ್ದು ಆರ್‌ಸಿಬಿ ಅಭಿಮಾನಿಗಳ ಸಂತಸ ಹೆಚ್ಚಿಸಿದೆ.
ಸ್ಫೋಟಕ ಬ್ಯಾಟಿಂಗ್
ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ರಜತ್ ಪಟಿದಾರ್ ನಾಲ್ಕು ಪಂದ್ಯಗಳಲ್ಲೇ ಮೂರು ಅರ್ಧಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ 53.25 ಸರಾಸರಿಯಲ್ಲಿ 213 ರನ್ ಗಳಿಸಿದ್ದಾರೆ. 177.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ, 17 ಬೌಂಡರಿ, 15 ಸಿಕ್ಸರ್ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ಮೂಲಕ 2025ರ ಐಪಿಎಲ್‌ನಲ್ಲಿ ಕೂಡ ಅಬ್ಬರಿಸುವ ಮುನ್ಸೂಚನೆ ಕೊಟ್ಟಿದ್ದಾರೆ. 20 ಲಕ್ಷ ರೂಪಾಯಿಗೆ ಆರ್ ಸಿಬಿ ತಂಡ ಸೇರಿದ್ದ ರಜತ್ ಪಟಿದಾರ್ ಇದೀಗ ಬರೋಬ್ಬರಿ 11 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.
2024ರ ಐಪಿಎಲ್‌ನಲ್ಲಿ ಆರ್ ಸಿಬಿ ತಂಡದ ಬ್ಯಾಟಿಂಗ್ ಬಲವಾಗಿದ್ದವರು ರಜತ್ ಪಟಿದಾರ್. ಆರಂಭದ ಕೆಲವು ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲವಾದರೂ ಒಮ್ಮೆ ಫಾರ್ಮ್‌ಗೆ ಮರಳಿದ ಬಳಿಕ ಅಬ್ಬರಿಸಿದ್ದರು. ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲರ್ ಗಳಿಗೆ ದೊಡ್ಡ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ.
ಈವರೆಗೆ 27 ಐಪಿಎಲ್ ಪಂದ್ಯಗಳನ್ನು ಆಡಿರುವ ಪಟಿದಾರ್, 37.74 ಸರಾಸರಿ, 158.85 ಸ್ಟ್ರೈಕ್‌ರೇಟ್‌ನಲ್ಲಿ 799 ರನ್ ಗಳಿಸಿದ್ದಾರೆ. 112 ರನ್ ಅವರ ಗರಿಷ್ಠ ಮೊತ್ತವಾಗಿದೆ ಇದರ ಜೊತೆ 7 ಅರ್ಧಶತಕ ಕೂಡ ಬಾರಿಸಿದ್ದಾರೆ. 51 ಬೌಂಡರಿ ಬಾರಿಸಿದ್ದರೆ 54 ಸಿಕ್ಸರ್ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. 2025ರ ಐಪಿಎಲ್‌ನಲ್ಲಿ ಆರ್ ಸಿಬಿ ತಂಡದ ಪ್ರಮುಖ ಬ್ಯಾಟರ್ ಆಗಿದ್ದು, ಕೊಹ್ಲಿ ಒಪ್ಪದೇ ಇದ್ದರೆ ಪಟಿದಾರ್ ಕೂಡ ನಾಯಕತ್ವದ ರೇಸ್‌ನಲ್ಲಿ ಇರಲಿದ್ದಾರೆ.












Click it and Unblock the Notifications