India vs New Zealand: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ತಂಡದಲ್ಲಿ ಎರಡು ಬದಲಾವಣೆ
ಬೆಂಗಳೂರಿನಲ್ಲಿ ಮಳೆ ಬಿಡುವು ಕೊಟ್ಟಿದ್ದು, ಭಾರತ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಮಳೆಯಿಂದಾಗಿ ಬುಧವಾರ ಮೊದಲ ದಿನದಾಟ ಸಂಪೂರ್ಣವಾಗಿ ರದ್ದಾದ ನಂತರ ಎರಡನೇ ದಿನ 15 ನಿಮಿಷ ಮುಂಚಿತವಾಗಿ ಆಟ ಆರಂಭವಾಗಿದೆ. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಭಾರತ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದರೂ, ಆರಂಭದಲ್ಲೇ ನಾಯಕ ರೋಹಿತ್ ಶರ್ಮಾರ ವಿಕೆಟ್ ಕಳೆದುಕೊಂಡಿದೆ.
ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಸೋಮವಾರದಿಂದಲೇ ನಗರದಲ್ಲಿ ಮಳೆಯಾಗುತ್ತಿರುವ ಕಾರಣ, ಆಟಗಾರರು ಸರಿಯಾಗಿ ಅಭ್ಯಾಸ ಮಾಡಲು ಆಗಿರಲಿಲ್ಲ.

ಬುಧವಾರ ಪಂದ್ಯ ಆರಂಭವಾಗಬೇಕಿತ್ತಾದರೂ ಇಡೀ ದಿನ ಮಳೆ ಸುರಿದ ಕಾರಣ, ಮಧ್ಯಾಹ್ನದ ಬಳಿಕ ದಿನದಾಟವನ್ನು ರದ್ದು ಮಾಡಲಾಯಿತು. ಟಾಸ್‌ಗೂ ಕೂಡ ಮಳೆ ಬಿಡುವು ಕೊಟ್ಟಿರಲಿಲ್ಲ. ಬುಧವಾರ ಬೆಳಿಗ್ಗೆಯಿಂದಲೇ ಮಳೆ ಸಂಪೂರ್ಣವಾಗಿ ನಿಂತಿದ್ದರಿಂದ 9.15ಕ್ಕೆ ಪಂದ್ಯವನ್ನು ಆರಂಭಿಸಲಾಯಿತು.
ಟಾಸ್ ಗೆದ್ದ ಭಾರತ
ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯವನ್ನು ಗೆಲ್ಲುವುದು ನಮ್ಮ ಗುರಿ, ಪಿಚ್ ಕವರ್ ಅಡಿಯಲ್ಲಿ ಇದ್ದ ಕಾರಣ ಬ್ಯಾಟಿಂಗ್‌ಗೆ ನೆರವಾಗುವ ಸಾಧ್ಯತೆ ಇದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಮೊದಲ ಟೆಸ್ಟ್‌ಗೆ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ.
ವೇಗಿ ಆಕಾಶ್ ದೀಪ್ ಬದಲಾಗಿ ಸ್ಪಿನ್ನರ್ ಕುಲದೀಪ್ ಯಾದವ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಕ್ಕಿದೆ. ಶುಭಮನ್ ಗಿಲ್ ಬದಲಾಗಿ ಸರ್ಫರಾಜ್ ಖಾನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆಘಾತ ಸಿಕ್ಕಿದೆ. ರೋಹಿತ್ ಶರ್ಮಾ ಆರಂಭದಲ್ಲೇ ಜೀವದಾನ ಪಡೆದರು, ಬಳಿಕ ಟಿಮ್ ಸೌಥಿ ಅವರ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನ್ಯೂಜಿಲೆಂಡ್ ಬಿಗಿಯಾದ ಬೌಲಿಂಗ್ ದಾಳಿ ನಡೆಸುತ್ತಿದ್ದು, ಭಾರತ ಆರಂಭಿಕ ಹಿನ್ನಡೆ ಅನುಭವಿಸಿದೆ.
ಉಭಯ ತಂಡಗಳ ಆಡುವ ಬಳಗ
ಭಾರತ : ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್ : ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಅಜಾಜ್ ಪಟೇಲ್, ವಿಲಿಯಂ ಒರೂರ್ಕೆ.












Click it and Unblock the Notifications