Ranji Trophy: ಕರ್ನಾಟಕ ಮಾರಕ ಬೌಲಿಂಗ್; 55 ರನ್‌ಗಳಿಗೆ ಪಂಜಾಬ್ ಆಲೌಟ್
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಮಾರಕ ಬೌಲಿಂಗ್ ದಾಳಿಗೆ ಪಂಜಾಬ್ ತತ್ತರಿಸಿ ಹೋಗಿದೆ. ಪಂಜಾಬ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 55 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದ್ದು, ಕರ್ನಾಟಕ ಬ್ಯಾಟಿಂಗ್ ಆರಂಭಿಸಿದ್ದು ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕರ್ನಾಟಕದ ಬೌಲಿಂಗ್ ದಾಳಿ ಎದುರು ಹೆಚ್ಚು ಹೊತ್ತು ನಿಲ್ಲಲು ಆಗಲೇ ಇಲ್ಲ. ರಮಣದೀಪ್ ಸಿಂಗ್ 16 ರನ್ ಗಳಿಸಿದ್ದು ಪಂಜಾಬ್ ಪರ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು, ಮಾಯಂಕ್ ಮಾರ್ಕಂಡೆ 12 ರನ್ ಗಳಿಸಿ ಎರಡನೇ ಹೆಚ್ಚು ರನ್ ಗಳಿಸಿದ ಆಟಗಾರನಾದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ರನ್ ಗಳಿಸಲಿಲ್ಲ.

11 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಪಂಜಾಬ್ ಬಳಿಕ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಹೋಯಿತು. ಒಂದು ಹಂತದಲ್ಲಿ 28 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಅಂತಿಮವಾಗಿ 29 ಓವರ್ ಗಳಲ್ಲಿ 55 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಮಿಂಚಿದ ವೇಗಿಗಳು
ಕರ್ನಾಟಕದ ವೇಗಿಗಳು ಚಿನ್ನಸ್ವಾಮಿ ಅಬ್ಬರಿಸಿದರು. ವಾಸುಕಿ ಕೌಶಿಕ್ 11 ಓವರ್ ಗಳಲ್ಲಿ ಕೇವಲ 16 ಬಿಟ್ಟುಕೊಟ್ಟು 4 ವಿಕೆಟ್ ಪಡೆದುಕೊಂಡರು. ಅಭಿಲಾಷ್ ಶೆಟ್ಟಿ 3 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರು. ಯಶೋವರ್ಧನ್ ಪರಂತಾಪ್ 1 ವಿಕೆಟ್ ಪಡೆದರು.
ಇನ್ನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ
ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದ್ದು, ಬೃಹತ್ ಮುನ್ನಡೆ ಪಡೆಯುವ ಸೂಚನೆ ಕೊಟ್ಟಿದೆ. ಅನೀಶ್ ಕೆವಿ 33 ರನ್ ಗಳಿಸಿ ಔಟಾದರೆ, ನಾಯಕ ಮಯಾಂಕ್ ಅಗರ್ವಾಲ್ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದಿನದಾಟದ ಅಂತ್ಯಕ್ಕೆ ಕರ್ನಾಟಕ 4 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿದ್ದು 144 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.
ದೇವದತ್ ಪಡಿಕ್ಕಲ್ 27 ರನ್ ಗಳಿಸಿ ಔಟಾದರೆ, ಕೆಎಲ್ ಶ್ರೀಜಿತ್ 26 ರನ್ ಗಳಿಸಿ ಔಟಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಮಿಂಚಿದ್ದ ಸ್ಮರಣ್ ರವಿಚಂದ್ರನ್ 83 ರನ್ ಗಳಿಸಿದ್ದು ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಸ್ಮರಣ್ ಶತಕ ಗಳಿಸುವ ವಿಶ್ವಾಸದಲ್ಲಿದ್ದು ಎರಡನೇ ದಿನ ಕರ್ನಾಟಕ ಮತ್ತಷ್ಟು ದೊಡ್ಡ ಮುನ್ನಡೆ ಪಡೆಯುವ ವಿಶ್ವಾಸದಲ್ಲಿದೆ.












Click it and Unblock the Notifications