CSK vs DC: ಸಿಎಸ್‌ಕೆ ತಂಡಕ್ಕೆ ಎಂಎಸ್ ಧೋನಿ ನಾಯಕ?
ಐಪಿಎಲ್ 2025ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಗೆದ್ದಿದ್ದು ಬಳಿಕ ಸತತವಾಗಿ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಸಿಎಸ್‌ಕೆ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲು ಸಜ್ಜಾಗಿದೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸಿಎಸ್‌ಕೆ ತಂಡದ ನಾಯಕ ಬದಲಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಎಂಎಸ್ ಧೋನಿ ನಾಯಕ?
ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಸದ್ಯ ಅವರು ಚೇತರಿಸಿಕೊಂಡಿರುವ ಬಗ್ಗೆ ಸಿಎಸ್‌ಕೆ ಇನ್ನೂ ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ಶನಿವಾರ ನಡೆಯಲಿರುವ ಪಂದ್ಯಕ್ಕೆ ಅವರು ಅಲಭ್ಯರಾದರೆ ಎಂಎಸ್ ಧೋನಿ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಗುವಾಹಟಿಯಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಕ್ವಾಡ್ ಬ್ಯಾಟಿಂಗ್ ಮಾಡುವ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಅವರು ಅಭ್ಯಾಸದಲ್ಲಿ ಕೂಡ ಭಾಗವಹಿಸಲು ಸಾಧ್ಯವಾಗಿಲ್ಲ.
ಸಿಎಸ್‌ಕೆ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಮಾತನಾಡಿ, ಗಾಯಕ್ವಾಡ್ ಶುಕ್ರವಾರ ಬ್ಯಾಟಿಂಗ್ ಅಭ್ಯಾಸ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಅವರ ಮೊಣಕೈ ನೋವು ಇನ್ನೂ ಇದೆ, ಆದರೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಶನಿವಾರ ಆಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
"ಅವರು ಆಡುವ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಅವರು ಆಡದಿದ್ದರೆ ನಾಯಕ ಯಾರು ಎನ್ನುವ ಬಗ್ಗೆ ಹೆಚ್ಚು ಯೋಚಿಸಿಲ್ಲ. ಅದರ ಬಗ್ಗೆ ನಾನು ಯೋಚಿಸಿಲ್ಲ, ಆದರೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಮತ್ತು ರುತುರಾಜ್ ಗಾಯಕ್ವಾಡ್ ಯೋಚಿಸಿದ್ದಾರೆ. ನಮ್ಮಲ್ಲಿ ಕೆಲವು ಯುವಕರು ಇದ್ದಾರೆ, ಅವರು ಸ್ಟಂಪ್ ಹಿಂದೆ ಉತ್ತಮ ಕೆಲಸ ಮಾಡಬಹುದು. ಆದರೆ ಈ ಬಗ್ಗೆ ನನಗೆ ಖಚಿತವಿಲ್ಲ" ಎಂದು ಹೇಳಿದ್ದಾರೆ.
ಧೋನಿಯೇ ನಾಯಕಾರುತ್ತಾರೆ ಎಂದು ಹೇಳಿಲ್ಲವಾದರೂ ಸಿಎಸ್‌ಕೆ ಬಳಿ ಬೇರೆ ಯಾವ ಆಯ್ಕೆ ಇದೆ ಎನ್ನುವುದನ್ನು ನೋಡಬೇಕಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾರಲ್ಲಿ ಯಾರಾದರೂ ಒಬ್ಬರು ನಾಯಕತ್ವ ವಹಿಸಿಕೊಂಡರೂ ಅಚ್ಚರಿಯಿಲ್ಲ. ಆದರೆ ಧೋನಿ ನಾಯಕತ್ವ ವಹಿಸಿಕೊಂಡರೆ ಅಭಿಮಾನಿಗಳ ಖುಷಿಗೆ ಪಾರವೇ ಇರುವುದಿಲ್ಲ.












Click it and Unblock the Notifications