MS Dhoni: ಎಂಎಸ್ ಧೋನಿ ದಿಢೀರ್ ನಿವೃತ್ತಿ ಘೋಷಣೆ?
ಭಾರತ ತಂಡದ ಮಾಜಿ ನಾಯಕ, ಐಪಿಎಲ್‌ನ ಯಶಸ್ವಿ ನಾಯಕ ಎಂಎಸ್ ಧೋನಿ ಅಭಿಮಾನಿಗಳಿಗೆ ಕಹಿ ಸುದ್ದಿ ಸಿಗುವ ಭಯ ಶುರುವಾಗಿದೆ!. 2025ರ ಐಪಿಎಲ್‌ನಲ್ಲಿ ಸಿಎಸ್‌ಕೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಎಂಎಸ್ ಧೋನಿ ಪ್ರದರ್ಶನದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಎಂಎಸ್ ಧೋನಿ ನಿವೃತ್ತಿ ಸುದ್ದಿಗೆ ಮತ್ತಷ್ಟು ಪುಷ್ಠಿ ಕೊಟ್ಟಿದ್ದು ಶನಿವಾರ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಪೋಷಕರು, ಪತ್ನಿ ಮತ್ತು ಮಗಳು ಕಾಣಿಸಿಕೊಂಡಿದ್ದು. ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಸಿಎಸ್‌ಕೆ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನೂ ಅಲ್ಲ, ಆದರೆ ಎಂಎಸ್ ಧೋನಿ ತಂದೆ-ತಾಯಿ ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಂಡಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಎಂಎಸ್ ಧೋನಿ ಪೋಷಕರಾದ ಪಾನ್ ಸಿಂಗ್ ಧೋನಿ ಮತ್ತು ದೇವಕಿ ದೇವಿ ಶನಿವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಹಾಜರಿದ್ದಾರೆ. 2008 ರಲ್ಲಿ ಸಿಎಸ್‌ಕೆ ಜೊತೆ ತಮ್ಮ ಮಗನ ಸಂಬಂಧ ಪ್ರಾರಂಭವಾದ ನಂತರ ಧೋನಿಯ ಪೋಷಕರು ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಇಲ್ಲಿಗೆ ಬಂದಿದ್ದು ಇದೇ ಮೊದಲು ಎನ್ನುವುದು ಮತ್ತೊಂದು ವಿಶೇಷ.
ಧೋನಿ ಅವರ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಕೂಡ ಹಾಜರಿದ್ದರು, ಆದರೂ ಅವರು ಆಗಾಗ್ಗೆ ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳಿಗೆ ಹಾಜರಾಗುತ್ತಿದ್ದರು. ಪಂದ್ಯಕ್ಕೂ ಮುನ್ನ, ಎಂಎಸ್ ಧೋನಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ವದಂತಿಗಳು ಇದ್ದವು. ಆದರೆ ರುತುರಾಜ್ ಗಾಯಕ್‌ವಾಡ್ ಫಿಟ್ ಆಗಿದ್ದರಿಂದ ಅವರೇ ನಾಯಕತ್ವ ವಹಿಸಿಕೊಂಡರು.
ಭಾನುವಾರ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೊಣಕೈಗೆ ಪೆಟ್ಟು ಬಿದ್ದ ಪರಿಣಾಮ ಸಿಎಸ್‌ಕೆ ತಂಡದ ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ಸಕಾಲದಲ್ಲಿ ಚೇತರಿಸಿಕೊಳ್ಳದಿದ್ದರೆ ಧೋನಿ ತಂಡವನ್ನು ಮುನ್ನಡೆಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಟಾಸ್‌ಗೆ ಬಂದ ರುತುರಾಜ್ ಗಾಯಕ್ವಾಡ್, "ನನ್ನ ಮೊಣಕೈ ಚೆನ್ನಾಗಿದೆ, ಪಂದ್ಯ ಆಡಲು ಉತ್ಸುಕನಾಗಿದ್ದೇನೆ." ಎಂದು ಹೇಳಿದರು.
43 ವರ್ಷದ ಎಂಎಸ್ ಧೋನಿ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದು ಟೀಕೆಗೆ ಕಾರಣವಾಗಿತ್ತು. ಈ ಬಗ್ಗೆ ಮಾತನಾಡಿದ್ದ ಸಿಎಸ್‌ಕೆ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಬ್ಯಾಟಿಂಗ್ ಸ್ಥಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಧೋನಿಗೆ ಬಿಟ್ಟದ್ದು ಎಂದು ಹೇಳಿದ್ದರು.












Click it and Unblock the Notifications