ಪ್ರೋ ಕಬಡ್ಡಿ ಗಾಯಾಳು ಪವನ್ ಸೆಹ್ರಾವತ್ ಭೇಟಿ ಮಾಡಿದ ಸಚಿವ ಅಶ್ವಥ್ ನಾರಾಯಣ್
ಬೆಂಗಳೂರು, ಅಕ್ಟೋಬರ್ 11: ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗಾಯಗೊಂಡು ಹೊರಬಿದ್ದಿರುವ ಬೆಂಗಳೂರು ಬುಲ್ಸ್ ತಂಡದ ಮಾಜಿ ಹಾಗೂ ತಮಿಳ್ ತಲೈವಾಸ್ ತಂಡದಲ್ಲಿ ಆಡುತ್ತಿರುವ ಕಬಡ್ಡಿ ಆಟಗಾರ ಪವನ್ ಸೆಹ್ರಾವತ್‌ರನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಭೇಟಿಯಾಗಿ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರು ಬುಲ್ಸ್ ತಂಡದಲ್ಲಿ ಆಡುತ್ತಿದ್ದ ಪವನ್ ಸೆಹ್ರಾವತ್ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ತಂಡ ಸೇರಿದ್ದರು. ಆದರೆ ಚೊಚ್ಚಲ ಪಂದ್ಯದಲ್ಲಿ ಗಾಯಗೊಂಡಿದ್ದರು.
ಸೋಮವಾರ ಈ ಕುರಿತು ಟ್ವೀಟ್ ಮಾಡಿರುವ ಅಶ್ವಥ್ ನಾರಾಯಣ್, " ಪ್ರೋ ಕಬಡ್ಡಿ ಲೀಗ್‌ನ ಸ್ಟಾರ್ ಆಟಗಾರ ಹಾಗೂ ಮಾಜಿ ಬುಲ್ಸ್ ಪಡೆಯ ನೆಚ್ಚಿನ ಹೀರೋ ಪವನ್ ಸೆಹ್ರಾವತ್ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲೇ ಗಾಯಕ್ಕೊಳಗಾಗಿದ್ದಾರೆ. ಅವರನ್ನು ಭೇಟಿ ಮಾಡಿದ್ದು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳ ಪರ ಹಾರೈಸುತ್ತೇನೆ" ಎಂದು ಬರದುಕೊಂಡಿದ್ದು, ಪವನ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪವನ್ ಸೆಹ್ರಾವತ್ ಬಲ ಪಾದದ ಗಾಯಕ್ಕೊಳಗಾದರು. ಗುಜರಾತ್ ಜೈಂಟ್ಸ್ ತಂಡದ ಚಂದ್ರನ್ ರಂಜಿತ್ ಅವರನ್ನು ಟ್ಯಾಕಲ್ ಮಾಡುವ ಪ್ರಯತ್ನದಲ್ಲಿದ್ದಾಗ ಪವನ್ ಸೆಹ್ರಾವತ್ ಅವರ ಬಲ ಪಾದ ಟ್ವಿಸ್ಟ್ ಆಗಿತ್ತು. ಹೀಗಾಗಿ ಪವನ್ ಅವರನ್ನು ಸ್ಟ್ರೆಚರ್ ಮೂಲಕ ಅಂಗಣದಿಂದ ಹೊರಕ್ಕೆ ಕರೆದೊಯ್ಯಲಾಯಿತು. ಪವನ್ ಅನುಪಸ್ಥಿತಿಯಲ್ಲಿ ಆಡಿದ ತಮಿಳ್ ತಲೈವಾಸ್ ಪಂದ್ಯವನ್ನು 31-31ರ ಅಂತರದಲ್ಲಿ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಪ್ರೋ ಕಬಡ್ಡಿ ಲೀಗ್‌ನಲ್ಲಿ ಏಕಾಂಗಿಯಾಗಿ ಹೋರಾಟ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಹೊದಿರುವ ಪವನ್ ಸೆಹ್ರಾವತ್‌ರನ್ನು ಈ ಬಾರಿಯ ಹರಾಜಿನಲ್ಲಿ ಬರೋಬ್ಬರಿ 2.26 ಕೋಟಿ ರೂ ನೀಡಿ ತಮಿಳ್ ತಲೈವಾಸ್ ಖರೀದಿಸಿತ್ತು. ಜೊತೆಗೆ ತಂಡದ ಜವಾಬ್ದಾರಿಯನ್ನು ನೀಡಲಾಗಿತ್ತು. ದುರಾದೃಷ್ಟವಶಾತ್ ಮೊದಲ ಪಂದ್ಯದಲ್ಲೇ ಗಾಯಗೊಂಡು ಹೊರ ಬಿದ್ದಿದ್ದಾರೆ.

ಪವನ್ ಪ್ರೋ ಕಬಡ್ಡಿನ ಇತಿಹಾಸದಲ್ಲಿ 105 ಪಂದ್ಯಗಳಲ್ಲಿ 1037 ಅಂಕಗಳಿಸಿದ್ದಾರೆ, ಇದರಲ್ಲಿ 987 ರೈಡಿಂಗ್ ಅಂಕಗಳನ್ನು ಗಳಿಸಿಕೊಂಡಿದ್ದಾರೆ. ಅವರ ಪ್ರತಿ ಪಂದ್ಯದ ಸರಾರಿ ಅಂಕ 9.4 ಇದೆ. ಒಟ್ಟಾರೆ ಗರಿಷ್ಠ ಅಂಕ ಪಡೆದವರ ಪಟ್ಟಿಯಲ್ಲಿ ಪವನ್ ಪರ್‌ದೀಪ್ ನರ್ವಾಲ್(1364) ಹಾಗೂ ದೀಪಕ್ ಹೂಡ(1074) ನಂತರದ ಸ್ಥಾನದಲ್ಲಿದ್ದಾರೆ. ರೈಡಿಂಗ್ ವಿಭಾಗದಲ್ಲೂ ಪರ್‌ದೀಪ್(1355)ಹಾಗೂ ಮಣೀಂದರ್ ಸಿಂಗ್( 1011) ನಂತರದ ಸ್ಥಾನದಲ್ಲಿದ್ದಾರೆ.












Click it and Unblock the Notifications