LSG vs MI: ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್‌ಗೆ ರೋಚಕ ಗೆಲುವು
ಲಕ್ನೋದ ಎಕಾನ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳ ಗೆಲುವು ಸಾಧಿಸಿದೆ. ಹಾರ್ದಿಕ್ ಪಾಂಡ್ಯ ಹೋರಾಟದ ನಡುವೆಯೂ ಮುಂಬೈ ಇಂಡಿಯನ್ಸ್ ಸೋಲು ಕಂಡಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು. ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಸ್ಫೋಟಕ ಆರಂಭ ನೀಡಿದರು. 31 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 60 ರನ್ ಗಳಿಸಿದರು.

ಏಡೆನ್ ಮಾರ್ಕ್ರಮ್ 38 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ಸಹಿತ 53 ರನ್ ಗಳಿಸಿ ಫಾರ್ಮ್ ಕಂಡುಕೊಂಡರು. ನಿಕೋಲಸ್ ಪೂರನ್ 6 ಎಸೆತಗಳಲ್ಲಿ 12 ರನ್ ಗಳಿಸಿ ನಿರಾಸೆ ಮೂಡಿಸಿದರು. ರಿಷಬ್ ಪಂತ್ ಕೇವಲ 2 ರನ್ ಗಳಿಸಿ ಔಟಾದರು. ಆಯುಷ್ ಬದೋನಿ 29 ಎಸೆತಗಳಲ್ಲಿ 4 ಬೌಂಡರಿ ಸಹಿತ 30 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 14 ಎಸೆತಗಳಲ್ಲಿ 27 ರನ್ ಗಳಿಸಿ ಮಿಂಚಿದರು.
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ 4 ಓವರ್ ಗಳಲ್ಲಿ 36 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದರು. ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್ ಮತ್ತು ವಿಘ್ನೇಶ್ ಪುತೂರ್ ತಲಾ ಒಂದು ವಿಕೆಟ್ ಪಡೆದರು.
ಸೂರ್ಯ ಹೋರಾಟ ವ್ಯರ್ಥ
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಕಾಶ್ ದೀಪ್ ಮತ್ತು ಶಾರ್ದೂಲ್ ಠಾಕೂರ್ ಆರಂಭದಲ್ಲೇ ಆಘಾತ ನೀಡಿದರು. ವಿಲ್ ಜ್ಯಾಕ್ಸ್ 7 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದರು. ರಿಯಾನ್ ರಿಕಲ್ಟನ್ 10 ರನ್ ಗಳಿಸಿ ಔಟಾದರು. ನಮನ್ ಧಿರ್ 24 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 46 ರನ್ ಗಳಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 9 ಬೌಂಡರಿ 1 ಸಿಕ್ಸರ್ ಸಹಿತ 67 ರನ್ ಗಳಿಸಿ ಔಟಾದರು.
ಸೂರ್ಯಕುಮಾರ್, ನಮನ್ ಧಿರ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು, ಆದರೆ ಇವರಿಬ್ಬರೂ ಔಟಾಗುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಗೆಲುವಿನ ದಾರಿ ಕಳೆದುಕೊಂಡಿತು. ತಿಲಕ್ ವರ್ಮಾ 23 ಎಸೆತಗಳಲ್ಲಿ 2 ಬೌಂಡರಿ ಸಹಿತ 25 ರನ್ ಮಾತ್ರ ಗಳಿಸಿದರು. ಅವರು ರಿಟೈರ್ಡ್ ಹರ್ಟ್ ಆದರೂ ಅಷ್ಟರಲ್ಲಾಗಲೇ ಮುಂಬೈ ಗೆಲುವಿನ ಹಾದಿ ಕಠಿಣವಾಗಿತ್ತು.
ನಾಯಕ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 28 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ತಲುಪಿಸಲು ಆಗಲಿಲ್ಲ. ಆವೇಶ್ ಖಾನ್ ಕೊನೆಯ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯರನ್ನು ಕಟ್ಟಿಹಾಕುವ ಮೂಲಕ ಎಲ್‌ಎಸ್‌ಜಿ ತಂಡಕ್ಕೆ ಗೆಲುವು ತಂದುಕೊಟ್ಟರು.












Click it and Unblock the Notifications