LSG Vs CSK: ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್: ಸಿಎಸ್‌ಕೆ ವಿರುದ್ಧ ಲಕ್ನೋ ತಂಡಕ್ಕೆ ಭರ್ಜರಿ ಗೆಲುವು
ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು.

ರಚಿನ್ ರವೀಂದ್ರ ಮೊದಲ ಎಸೆತದಲ್ಲೇ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ನಾಯಕ ರುತುರಾಜ್ ಗಾಯಕ್ವಾಡ್ 13 ಎಸೆತಗಳಲ್ಲಿ 17 ರನ್ ಗಳಿಸಿದರು. ಅಜಿಂಕ್ಯ ರಹಾನೆ 24 ಎಸೆತಗಳಲ್ಲಿ 36 ರನ್ ಗಳಿಸಿದರೂ, ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.
ಜಡೇಜಾ, ಧೋನಿ ಆಸರೆ
ಶಿವಂ ದುಬೆ 8 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ಔಟಾದರು. ಸಮೀರ್ ರಿಜ್ವಿ ಕೂಡ 5 ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು. ರವೀಂದ್ರ ಜಡೇಜಾ 40 ಎಸೆತಗಳಲ್ಲಿ ಅಜೇತ 57 ರನ್ ಗಳಿಸುವ ಮೂಲಕ ಸಿಎಸ್‌ಕೆ ತಂಡಕ್ಕೆ ನೆರವಾದರು.
ಮೊಯೀನ್ ಅಲಿ 20 ಎಸೆತಗಳಲ್ಲಿ 30 ರನ್ ಗಳಿಸಿದರೆ, ಕೊನೆಯಲ್ಲಿ ಕ್ರೀಸ್‌ಗೆ ಬಂದ ಎಂಎಸ್ ಧೋನಿ ಅಬ್ಬರಿಸಿದರು. 9 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 28 ರನ್ ಗಳಿಸಿ ಸಿಎಸ್‌ಕೆ ತಂಡ 176 ರನ್ ಗಳಿಸಲು ಸಹಾಯ ಮಾಡಿದರು.
ಕೆಎಲ್ ರಾಹುಲ್, ಡಿ ಕಾಕ್ ಅರ್ಧಶತಕ
177 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್ ಅತ್ಯುತ್ತಮ ಆರಂಭ ಪಡೆಯಿತು. ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅರ್ಧಶತಕ ಗಳಿಸಿದರು.
ಕ್ವಿಂಟನ್ ಡಿ ಕಾಕ್ 43 ಎಸೆತಗಳಲ್ಲಿ 54 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ 53 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಿತ 82 ರನ್ ಗಳಿಸಿದರು. ನಿಕೋಲಸ್ ಪೂರನ್ 12 ಎಸೆತಗಳಲ್ಲಿ ಅಜೇಯ 23 ರನ್ ಗಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 8 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.
19 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಬೀಗಿತು. ಅರ್ಧಶತಕ ಗಳಿಸಿದ ಕೆಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.












Click it and Unblock the Notifications