GT vs LSG: ಮಿಚೆಲ್ ಮಾರ್ಷ್ ಅಬ್ಬರಕ್ಕೆ ಶರಣಾದ ಗುಜರಾತ್ ಟೈಟನ್ಸ್
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ 33 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಲಕ್ನೋ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 235 ರನ್ ಕಲೆಹಾಕಿತು. ಮಿಚೆಲ್ ಮಾರ್ಷ್ ಅಮೋಘ ಶತಕದ ಎದುರು ಗುಜರಾತ್ ಟೈಟಾನ್ಸ್ ಆಟ ಮಂಕಾಯಿತು.

ಮಿಚೆಲ್ ಮಾರ್ಷ್, ಪೂರನ್ ಅಬ್ಬರ
ಮೊದಲು ಬ್ಯಾಟಿಂಗ್ ಮಾಡಿದ ಎಲ್‌ಎಸ್‌ಜಿ ಮೊದಲ ವಿಕೆಟ್‌ಗೆ 91 ರನ್ ಕಲೆಹಾಕಿತು. ಐಡೆನ್ ಮಾರ್ಕ್ರಮ್ 24 ಎಸೆಗಳಲ್ಲಿ 36 ರನ್ ಗಳಿಸುವ ಮೂಲಕ ಮಿಚೆಲ್ ಮಾರ್ಷ್‌ಗೆ ಜೊತೆಯಾಗಿ ನಿಂತರು. ಅವರು ಔಟಾದ ಬಳಿಕ ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಜೋಡಿ ಗುಜರಾತ್ ಟೈಟಾನ್ಸ್ ಬೌಲರ್ ಗಳ ಬೆವರಿಳಿಸಿದರು.
ಎರಡನೇ ವಿಕೆಟ್‌ಗೆ ಈ ಜೋಡಿ 121 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಮಿಚೆಲ್ ಮಾರ್ಷ್ 64 ಎಸೆತಗಳಲ್ಲಿ 10 ಬೌಂಡರಿ 8 ಭರ್ಜರಿ ಸಿಕ್ಸರ್ ಸಹಿತ 117 ರನ್ ಚಚ್ಚಿದರು. ನಿಕೋಲಸ್ ಪೂರನ್ 27 ಎಸೆತಗಳಲ್ಲಿ 4 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 56 ರನ್ ಗಳಿಸಿದರು. ನಾಯಕ ಪಂತ್ ಕೊನೆಯಲ್ಲಿ 6 ಎಸೆತಗಳಲ್ಲಿ 2 ಸಿಕ್ಸರ್ ಸಹಿತ ಅಜೇಯ 16 ರನ್ ಗಳಿಸಿ ನೆರವಾದರು.
ಓ ರೂರ್ಕ್ ಮಾರಕ ಬೌಲಿಂಗ್
236 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಸ್ಫೋಟಕ ಆರಂಭ ಪಡೆದರೂ ಸಾಯಿ ಸುದರ್ಶನ್ ಅವರ ವಿಕೆಟ್ ಬೇಗನೆ ಕಳೆದುಕೊಂಡಿತು. ಸಾಯಿ ಸುದರ್ಶನ್ 21 ರನ್ ಗಳಿಸಿ ಔಟಾದರೆ. ಶುಭಮನ್ ಗಿಲ್ 35 ರನ್ ಗಳಿಸಿ ಔಟಾದರು. ಜೋಸ್ ಬಟ್ಲರ್ 33 ರನ್ ಗಳಿಸಿದ್ದಾಗ ಮಹಾರಾಜ್ ಸಿಂಗ್‌ಗೆ ಬೌಲ್ಡ್ ಆದರು. 96 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಆದರೆ ಶಾರುಖ್ ಖಾನ್ ಮತ್ತು ಶೆರ್ಫಾನೆ ರುಥರ್ ಪೋರ್ಡ್ 91 ರನ್‌ಗಳ ಜೊತೆಯಾಟ ಆಡುವ ಮೂಲಕ ಗುಜರಾತ್ ಟೈಟಾನ್ಸ್‌ಗೆ ಗೆಲುವಿನ ಭರವಸೆ ಮೂಡಿಸಿದ್ದರು.
ಸಾಯಿ ಸುದರ್ಶನ್ ವಿಕೆಟ್ ಪಡೆದಿದ್ದ ವಿಲಿಮಯ್ ಓ ರೂರ್ಕ್ ಬಳಿಕ ಶೆರ್ಫಾನೆ ರುಥರ್ ಫೋರ್ಡ್ ಮತ್ತು ರಾಹುಲ್ ತೆವಾಟಿಯಾ ವಿಕೆಟ್ ಪಡೆಯುವ ಮೂಲಕ ಎಲ್‌ಎಸ್‌ಜಿ ಮೇಲುಗೈ ಸಾಧಿಸುವಂತೆ ನೋಡಿಕೊಂಡರು. ಶಾರುಖ್ ಖಾನ್ 29 ಎಸೆತಗಳಲ್ಲಿ 57 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ಗುಜರಾತ್ ಟೈಟಾನ್ಸ್ 202 ರನ್ ಮಾತ್ರ ಗಳಿಸುವುದರೊಂದಿಗೆ 33 ರನ್‌ಗಳಿಂದ ಸೋಲೊಪ್ಪಿಕೊಂಡಿತು.












Click it and Unblock the Notifications