ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ವೈಭವ್ ಸೂರ್ಯವಂಶಿಗೆ ಸವಾಲು
Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರಾಗಿದ್ದಾರೆ. ಇದೀಗ ಅವರ ಬಗ್ಗೆ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಹೇಗೆ ಅಂದ್ರೆ ವೈಭವ್‌ಗೆ ಸವಾಲೊಡ್ಡುವ ರೀತಿಯಲ್ಲಿ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ನ್ಯೂಜಿಲೆಂಡ್‌ನ ವೇಗದ ಬೌಲರ್ ಲಾಕಿ ಫರ್ಗುಸನ್ ಅವರು ಭಾರತದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸವು ಈ ಯುವ ಕ್ರಿಕೆಟಿಗನಿಗೆ ಪ್ರಮುಖ ಸವಾಲಾಗಿರಲಿದೆ ಎಂದು ಹೇಳಿದ್ದಾರೆ.

ವೈಭವ್ ಸೂರ್ಯವಂಶಿಗೆ ಹೊಸ ಸವಾಲು
'ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿರುವ ಟೀಮ್ ಇಂಡಿಯಾ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಈ ಪ್ರವಾಸವು ಅವರ ಕ್ರಿಕೆಟ್ ಜೀವನಕ್ಕೆ ಹೊಸ ಅನುಭವ ಹಾಗೂ ಸವಾಲನ್ನು ತರಲಿದೆ,' ಎಂದು ಫರ್ಗುಸನ್ ಹೇಳಿದ್ದಾರೆ.
ನ್ಯೂಜಿಲೆಂಡ್‌ನಲ್ಲಿನ ಮೈದಾನಗಳ ಬಗ್ಗೆ ವಿವರಣೆ
ಭಾರತೀಯ ಮೈದಾನಗಳಿಗೆ ಹೋಲಿಸಿದರೆ ನ್ಯೂಜಿಲೆಂಡ್‌ನ ಕ್ರೀಡಾಂಗಣಗಳು ಮತ್ತು ಅಲ್ಲಿನ ವಾತಾವರಣ ಸಂಪೂರ್ಣವಾಗಿ ವಿಭಿನ್ನವಾಗಿವೆ. ಈಡನ್ ಪಾರ್ಕ್‌ನಂತಹ ಸಣ್ಣ ಮೈದಾನಗಳಿಂದ ಹಿಡಿದು ದೊಡ್ಡ ಬೌಂಡರಿಗಳಿರುವ ಮೈದಾನಗಳವರೆಗೆ ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಯಾವುದೇ ಯುವ ಆಟಗಾರನಿಗೆ ಸುಲಭವಲ್ಲ. ಆದ್ದರಿಂದ ಅಲ್ಲಿಗೆ ತಕ್ಕಂತೆ ತಂತ್ರ ರೂಪಿಸುವುದು ಸೂರ್ಯವಂಶಿಗೆ ಪ್ರಮುಖ ಪರೀಕ್ಷೆಯಾಗಲಿದೆ.
'ನಿರ್ಭಯ ಆಟದ ಶೈಲಿ ಹೆಚ್ಚಿನ ಮೆರುಗು ನೀಡುತ್ತದೆ'
ಭಾರತದಿಂದ ಪ್ರತಿವರ್ಷವೂ ಹೊಸ ಹೊಸ ಅತ್ಯುತ್ತಮ ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಫರ್ಗುಸನ್, ಇಂದಿನ ಯುವ ಆಟಗಾರರು ಪ್ರದರ್ಶಿಸುವ ನಿರ್ಭಯ ಕ್ರಿಕೆಟ್ ಶೈಲಿಯು ಆಟಕ್ಕೆ ಹೆಚ್ಚಿನ ಮೆರುಗು ನೀಡುತ್ತದೆ ಎಂದು ಹೇಳಿದ್ದಾರೆ. ಇನ್ನೂ ಇತ್ತೀಚೆಗಷ್ಟೇ ನಡೆದ ಸರಣಿಗಳಲ್ಲಿ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವೈಭವ್, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತೀಯ ತಂಡದ ಪ್ರಮುಖ ಆಕರ್ಷಣೆಯಾಗಲಿದ್ದಾರೆ ಎಂದು ಹೇಳಬಹುದು.
ವೈಭವ್ ಸೂರ್ಯವಂಶಿ ಆಯ್ಕೆ ಬಗ್ಗೆ ಮಹತ್ವದ ಮಾಹಿತಿ
ಮತ್ತೊಂದೆಡೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಪ್ರದರ್ಶನವು ಆಯ್ಕೆಗಾರರ ಗಮನ ಸೆಳೆದಿದೆ. ಅವರು ಏಷ್ಯನ್ ಗೇಮ್ಸ್ ವೇಳೆ ಅಭಿಷೇಕ್ ಶರ್ಮಾ ಅವರೊಂದಿಗೆ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಹಿನ್ನೆಲೆಯಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಅವರನ್ನು ಆರಂಭಿಕರಾಗಿ ಪರಿಗಣಿಸಬೇಕೆಂಬ ಕೂಗುಗಳು ಕೇಳಿಬಂದಿದ್ದವು.
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರಾ ಅವರು, ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟಿ20 ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. 'ಬಿಹಾರದ ನೆರೆಹೊರೆಯಲ್ಲಿ ಸೂರ್ಯವಂಶಿ ಬಗ್ಗೆ ಚರ್ಚೆಗಳು ನಡೆಯುತ್ತಿರಬಹುದು. ಆದರೆ, ಅವರಿಗೆ ಈ ಹಂತದಲ್ಲಿ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗಲು ಸಾಧ್ಯವಿಲ್ಲ,' ಎಂದು ಹೇಳಿದ್ದಾರೆ.
'ಒಂದೆರಡು ಪಂದ್ಯಗಳಲ್ಲಿ ವಿಫಲರಾದ ತಕ್ಷಣವೇ ಸಂಜು ಸ್ಯಾಮ್ಸನ್ ಅವರನ್ನು ಬದಲಾಯಿಸಬೇಕು ಎನ್ನಲು ಸಾಧ್ಯವಿಲ್ಲ. ಪ್ರತಿ ಪಂದ್ಯದ ನಂತರವೂ ನಾವು ಹೀಗೆಯೇ ಪ್ರಶ್ನೆ ಮಾಡಲು ಆರಂಭಿಸಿದರೆ ಕ್ರಿಕೆಟ್‌ನಲ್ಲಿ ಒಂದು ತಂಡವನ್ನು ನಿರ್ವಹಣೆ ಮಾಡುವುದು ಹೇಗೆ?,' ಎಂದು ಆಕಾಶ್ ಚೋಪ್ರಾ ಅವರು ಪ್ರಶ್ನಿಸಿದ್ದಾರೆ.
ಚೋಪ್ರಾ ಅವರ ಪ್ರಕಾರ, ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಹಾಗೂ ನಂತರದ ಪ್ರಮುಖ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಪ್ರತಿಯೊಂದು ಪಂದ್ಯದ ನಂತರವೂ ಆಟಗಾರನ ಸ್ಥಾನದ ಮೇಲೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಅಲ್ಲದೆ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿಯೂ ಮಾತನಾಡಿದ ಅವರು, 'ನಿತೀಶ್‌ಗೆ ಅವಕಾಶ ನೀಡಲು ತಾವು ಇಷ್ಟಪಡುವುದಾಗಿ ಹೇಳಿದರೂ, ತಂಡದ ಮ್ಯಾನೇಜ್‌ಮೆಂಟ್ ತಕ್ಷಣವೇ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡುವ ಆಲೋಚನೆಯಲ್ಲಿ ಇಲ್ಲ,' ಎಂದು ತಿಳಿಸಿದ್ದಾರೆ.


Click it and Unblock the Notifications
