Lalit Modi: ವಿದೇಶಿ ಪೌರತ್ವ ಪಡೆದ ಲಲಿತ್ ಮೋದಿ; ಭಾರತಕ್ಕೆ ಮರಳಿ ತರುವ ಪ್ರಯತ್ನಕ್ಕೆ ದೊಡ್ಡ ಹಿನ್ನಡೆ
ಐಪಿಎಲ್ ಮಾಜಿ ಮುಖ್ಯಸ್ಥ ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಲಲಿತ್ ಮೋದಿ ಭಾರತೀಯ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರ ಮಾಡಿದ್ದಾರೆ. 12 ವರ್ಷಗಳಿಂದ ತಲೆಮರೆಸಿಕೊಂಡಿರುವ ಲಲಿತ್ ಮೋದಿ ಇದೀಗ ಭಾರತದ ಪೌರತ್ವವನ್ನು ತೊರೆದು ಸಣ್ಣ ದ್ವೀಪ ರಾಷ್ಟ್ರವಾಗಿರುವ ವನವಾಟುವಿನ ಪೌರತ್ವ ಪಡೆದುಕೊಂಡಿದ್ದಾರೆ.
ಮಾಹಿತಿಯ ಪ್ರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಮೂಲಕ ವನವಾಟುವಿನ ಪೌರತ್ವ ಪಡೆದುಕೊಂಡಿದ್ದು, ಭಾರತದ ಕಾನೂನುಗಳಿಂದ ಪಾರಾಗುವ ಯೋಚನೆಯಲ್ಲಿದ್ದಾರೆ. ಭಾರತ ಸರ್ಕಾರಕ್ಕೆ ಈಗ ಲಲಿತ್ ಮೋದಿಯನ್ನು ವಾಪಸ್ ಕರೆತರುವುದು ಮತ್ತಷ್ಟು ಕಷ್ಟವಾಗಲಿದೆ.

ವನವಾಟು ದೇಶದಲ್ಲಿ ಯಾವುದೇ ತೆರಿಗೆ ಇಲ್ಲದ ಕಾರಣ, ಅನೇಕ ಶ್ರೀಮಂತರ ಪಾಲಿನ ಸ್ವರ್ಗವಾಗಿದೆ. ಈ ದೇಶದಲ್ಲಿ ಹಣ ಹೂಡಿಕೆ ಮಾಡುವ ಶ್ರೀಮಂತರಿಗೆ ಗೋಲ್ಡನ್ ವೀಸಾ ನೀಡುತ್ತದೆ. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದರೆ ಮಾತ್ರ ಈ ದೇಶದ ವೀಸಾ ಪಡೆಯಬಹುದಾಗಿದೆ.
ವನವಾಟು ದೇಶವು ಯಾವುದೇ ದೇಶದ ಜೊತೆ ಆರೋಪಿಗಳ ಹಸ್ತಾಂತರ ಒಪ್ಪಂದವನ್ನು ಹೊಂದಿಲ್ಲದ ಕಾರಣ, ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವುದು ರಾಜತಾಂತ್ರಿಕವಾಗಿ ಕಠಿಣವಾಗಿದೆ. ವಿಶ್ವದ ಹಲವು ದೇಶಗಳಲ್ಲಿ ವಂಚನೆ ಮತ್ತು ಹಗರಣಗಳಲ್ಲಿ ಭಾಗಿಯಾಗಿರುವ ಜನರಿಗೆ ವನವಾಟು ಸುರಕ್ಷಿತ ದೇಶಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಭಾರತದಲ್ಲಿ ವಂಚನೆ ಆರೋಪಗಳನ್ನು ಎದುರಿಸುತ್ತಿರುವ ಅನೇಕರು ಪರಾರಿಯಾಗಿದ್ದು ವಿದೇಶಗಳಲ್ಲಿ ನೆಲೆಸಿದ್ದಾರೆ. ಭಾರತದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಕೂಡ 2017ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿದ್ದಾರೆ. ಭಾರತ ಹಲವು ಭಾರಿ ಪ್ರಯತ್ನ ಪಟ್ಟರೂ ಕಾನೂನು ಸಮಸ್ಯೆಗಳಿರುವ ಕಾರಣ ಮೆಹುಲ್ ಚೋಕ್ಸಿಯನ್ನು ಮರಳಿ ಕರೆತರಲು ಸಾಧ್ಯವಾಗಿಲ್ಲ.
ವನವಾಟು ಪೌರತ್ವ ಪಡೆಯುತ್ತಿದ್ದಂತೆ ಲಲಿತ್ ಮೋದಿ ಅವರ ಭಾರತದ ಪೌರತ್ವ ರದ್ದಾಗಿದೆ. ಭಾರತ ಸರ್ಕಾರ ಅವರನ್ನು ಮರಳಿ ಕರೆತರಬೇಕು ಎಂದರೆ ರಾಜತಾಂತ್ರಿಕ ಮತ್ತು ಕಾನೂನು ಪ್ರಯತ್ನಗಳನ್ನು ಮಾಡಬಹುದು. ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ 468 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಬಿಸಿಸಿಐ 2010ರಲ್ಲಿ ಲಲಿತ್ ಮೋದಿ ಸೇರಿದಂತೆ ಹಲವರ ವಿರುದ್ಧ ದೂರು ನೀಡಿತ್ತು. ಲಲಿತ್ ಮೋದಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದ್ದು ತನಿಖೆ ಮಾಡುತ್ತಿದೆ.
2008 ರಲ್ಲಿ ಬಿಸಿಸಿಐ ವರ್ಲ್ಡ್ ಸ್ಪೋರ್ಟ್ಸ್ ಗ್ರೂಪ್ (ಡಬ್ಲ್ಯೂಎಸ್‌ಜಿ) ಗೆ 10 ವರ್ಷಗಳ ಕಾಲ ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು $918 ಮಿಲಿಯನ್‌ಗೆ ನೀಡಿದ್ದರಿಂದ ಹಗರಣ ಆರಂಭವಾಗಿದೆ. ಈ ಪ್ರಕರಣದಲ್ಲಿ ಲಲಿತ್ ಮೋದಿ ಹೆಸರು ಪ್ರಮುಖವಾಗಿ ಕೇಳಿಬಂದಿದ್ದು ನೂರಾರು ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಭಾರತದಿಂದ ಪರಾರಿಯಾದ ಬಳಿಕ ಲಲಿತ್ ಮೋದಿ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರು. ಅಲ್ಲಿಂದ ಅವರನ್ನು ಭಾರತಕ್ಕೆ ಕರೆತರಲು ಪ್ರಯತ್ನಗಳನ್ನು ನಡೆಸಿದರು ಪ್ರಯೋಜನವಾಗಲಿಲ್ಲ. ಇದೀಗ ಅವರು ಹೊಸ ದೇಶದ ಪೌರತ್ವ ಪಡೆಯುವ ಮೂಲಕ ಭಾರತದ ಪ್ರಯತ್ನಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ.












Click it and Unblock the Notifications