RCB Vs RCB: ವಿರಾಟ್ ಕೊಹ್ಲಿ Vs ಗೌತಮ್ ಗಂಭೀರ್ ಘರ್ಷಣೆ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮತ್ತೊಂದು ಬಹು ನಿರೀಕ್ಷಿತ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಹಲವು ಕಾರಣಗಳಿಂದ ಈ ಪಂದ್ಯ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
2023ರ ಐಪಿಎಲ್‌ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಮತ್ತೆ ಇಂದು ಮುಖಾಮುಖಿಯಾಗುತ್ತಿದ್ದಾರೆ. ಇದು ಮೈದಾನದ ಹೊರಗಿನ ಕದನವಾಗಿದೆ.

ಐಪಿಎಲ್ ಆರಂಭಿಕ ಆವೃತ್ತಿಯಲ್ಲಿ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದವು. ಎರಡೂ ತಂಡಗಳು ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮೈದಾನದಲ್ಲಿ ಎರಡೂ ತಂಡಗಳ ನಡುವೆ ಹಲವು ಘರ್ಷಣೆಗಳು ನಡೆದಿದ್ದು, ಸ್ಪರ್ಧೆಯ ತೀವ್ರತೆಯನ್ನು ಹೆಚ್ಚಿಸಿದೆ.
2013ರಲ್ಲಿ ಮೊದಲ ಘರ್ಷಣೆ
2013 ರಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಮೈದಾನದಲ್ಲಿ ಮಾತಿನ ಚಕಮಕಿಯಾಗಿತ್ತು. ಅದಾದ ಮೂರು ವರ್ಷಗಳ ಬಳಿಕ 2016ರಲ್ಲಿ ಆರ್ ಸಿಬಿ ವಿರುದ್ಧ ಕೆಕೆಆರ್ ರೋಚಕ ಪಂದ್ಯದಲ್ಲಿ ಸೋತಾಗ ತಂಡದಗೌತಮ್ ಗಂಭೀರ್ ಡಗೌಟ್‌ನಲ್ಲಿ ಕುರ್ಚಿಯನ್ನು ಒದೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ಆವೃತ್ತಿಯಲ್ಲಿ ಜಗಳ
ಗೌತಮ್ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದಾಗ ಕೂಡ ಆರ್ ಸಿಬಿ ಜೊತೆ ಕಿರಿಕ್ ಮಾಡಿಕೊಂಡಿದ್ದರು. 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಎರಡು ಬಾರಿ ಮುಖಾಮುಖಿಯಾದಾಗಲೂ ಘರ್ಷಣೆ ಸಂಭವಿಸಿತ್ತು.
ಬೆಂಗಳೂರಿನಲ್ಲಿ ಆರ್ ಸಿಬಿ ಅಭಿಮಾನಿಗಳಿಗೆ ಗೌತಮ್ ಗಂಭೀರ್ ಮೌನವಾಗಿರಿ ಎಂದು ಸನ್ನೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆವೇಶ್ ಖಾನ್ ಕೊನೆಯ ಎಸೆತದಲ್ಲಿ ಪಂದ್ಯ ಗೆದ್ದಾಗ ಹೆಲ್ಮೆಟ್ ನೆಲಕ್ಕೆ ಎಸೆದು ವೀರಾವೇಶವಾಗಿ ಸಂಭ್ರಮಿಸಿದ್ದರು.
ಬಳಿಕ ಲಕ್ನೋದಲ್ಲಿ ಆರ್ ಸಿಬಿ ತಂಡ ಲಕ್ನೋ ತಂಡವನ್ನು ಸೋಲಿಸಿತ್ತು. ಈ ಪಂದ್ಯದಲ್ಲಿ ಕೊಹ್ಲಿ-ನವೀನ್ ಉಲ್ ಹಕ್ ನಡುವೆ ಮೈದಾನದಲ್ಲಿ ಜಗಳವಾದರೆ, ಪಂದ್ಯ ಮುಗಿದ ಬಳಿಕ ಗಂಭೀರ್ ಮತ್ತು ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು.
ಈ ವರ್ಷ ಗೌತಮ್ ಗಂಭೀರ್ ಕೆಕೆಆರ್ ತಂಡಕ್ಕೆ ಮಾರ್ಗದರ್ಶಕರಾಗಿ ಮರಳಿದ್ದಾರೆ. ಅಭಿಮಾನಿಗಳು ಮತ್ತೊಮ್ಮೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಸಂಘರ್ಷ ನೋಡಲು ಕಾತರರಾಗಿದ್ದಾರೆ.
ಎರಡೂ ತಂಡಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆ ಇದೆ. ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್, ಕ್ಯಾಮೆರಾನ್ ಗ್ರೀನ್ ಮೇಲೆ ಆರ್ ಸಿಬಿ ಹೆಚ್ಚಾಗಿ ಅವಲಂಬಿತವಾಗಿದೆ. ಕೆಕೆಆರ್ ತಂಡದಲ್ಲಿ ಶ್ರೇಯಸ್ ಅಯ್ಯರ್, ಆಂಡ್ರೆ ರಸೆಲ್, ನಿತೀಶ್ ರಾಣಾ ಪ್ರಮುಖ ಅಸ್ತ್ರವಾಗಿದ್ದಾರೆ.












Click it and Unblock the Notifications