2026ರ ಒಲಿಂಪಿಕ್ಸ್‌ನತ್ತ ದೃಷ್ಟಿ ನೆಟ್ಟ ಕೊಡಗಿನ ಭವಾನಿ, ಯಾರಿದು? ಹಾಗೂ ಇವರ ಅದ್ಭುತ ಸಾಧನೆಗಳನ್ನು ತಿಳಿಯಿರಿ
ಮೈಸೂರು, ಸೆಪ್ಟೆಂಬರ್, 05: ಇದುವರೆಗೆ ಸ್ಕೀಯಿಂಗ್, ಕ್ರಾಸ್ ಕಂಟ್ರಿ, ಪರ್ವತಾರೋಹಣ ಮೊದಲಾದವುಗಳಲ್ಲಿ ಭಾಗವಹಿಸಿ ರಾಷ್ಟ್ರ ಮತ್ತು ರಾಜ್ಯವನ್ನು ಪ್ರತಿನಿಧಿಸಿ ದಾಖಲೆ ಬರೆದ ಕೊಡಗಿನ ಹುಡುಗಿ ಭವಾನಿ ತೆಕ್ಕಡ ಅವರು ಇದೀಗ ಬಯಾಥ್ಲಾನ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಇವರು ಕಜಕಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಏಷ್ಯನ್ ಸಮ್ಮರ್ ಬಯಾಥ್ಲಾನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮೂಲಕ ಭಾರತವನ್ನು ಪ್ರತಿನಿಧಿಸಿದ ಮೊದಲ ಮಹಿಳೆ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಮುಂದಿನ ಒಲಂಪಿಕ್ಸ್‌ನತ್ತ ದೃಷ್ಟಿ ನೆಟ್ಟಿರುವ ಭವಾನಿ ಅವರು ಅದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಕಠಿಣ ರೀತಿಯ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಬಯಾಥ್ಲಾನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಇದು ಮುಂದಿನ ಅವರ ಸಾಧನೆಗೆ ಅಡಿಗಲ್ಲಾಗಿದೆ ಎಂದರೆ ತಪ್ಪಾಗಲಾರದು.

ಅಂತಾರಾಷ್ಟ್ರೀಯ ಮಟ್ಟದ ಬಯಾಥ್ಲಾನ್ ಸ್ಪರ್ಧೆಯು ಕಜಕಿಸ್ತಾನದಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 5ರವರೆಗೆ ನಡೆಯಿತು. ಇದೇ ಮೊದಲ ಬಾರಿಗೆ ಯುವತಿಯೊಬ್ಬಳು ಅದರಲ್ಲೂ ಕರ್ನಾಟಕದ ಕೊಡಗು ಮೂಲದವರು ಭಾರತವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷಯವಾಗಿದೆ. ಸಮ್ಮರ್ ಬಯಾಥ್ಲಾನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಭವಾನಿಗೆ ಮುಂಬೈನ ಮಾಟುಂಗಾದ ರತ್ನಾಕರ ಸೇಟ್ ಮತ್ತು ಶ್ರೀಮತಿ ಶಾಂತಿ ಸೇಟ್, ಬೆಂಗಳೂರಿನ ಶ್ರೀಮತಿ ಶ್ವೇತಾ ಶ್ರವಣ್ ಅವರು ಸಹಕಾರ ನೀಡಿದ್ದನ್ನು ಬಯಾಥ್ಲಾನ್ ಅಸೋಸಿಯೇಷನ್ ಆಫ್ ಕರ್ನಾಟಕ ಸ್ಮರಿಸಿದೆ.
ಒಲಂಪಿಕ್ಸ್‌ಗೆ ಬೇಕಾದ ಕಠಿಣ ತರಬೇತಿ
ಭವಾನಿ ಅವರು ಒಂದು ವರ್ಷಗಳ ಕಾಲ ಕಜಕಿಸ್ತಾನದಲ್ಲಿದ್ದು ಮುಂದಿನ ಒಲಂಪಿಕ್ಸ್‌ಗೆ ಬೇಕಾದ ಕಠಿಣ ತರಬೇತಿಯನ್ನು ಪಡೆಯಲಿದ್ದಾರೆ ಎನ್ನಲಾಗಿದೆ. ಕಳೆದೊಂದು ದಶಕದಿಂದ ಒಂದಲ್ಲ ಒಂದು ರೀತಿಯ ಸಾಧನೆಗಳನ್ನು ಮಾಡುತ್ತಿರುವ ಅವರು ಈ ಹಿಂದೆ ಸ್ಲೋವೆನಿಯಾದಲ್ಲಿ ನಡೆದ ಕ್ರಾಸ್ ಕಂಟ್ರಿಯಲ್ಲಿ ಭಾಗವಹಿಸಿದ್ದರಾದರೂ ಗೆಲುವು ದೊರೆತಿರಲಿಲ್ಲ. ಆದರೆ ಒಂದೊಳ್ಳೆಯ ಸಾಧನೆ ಮಾಡಲು ಅದರಿಂದ ಸಾಧ್ಯವಾಗಿತ್ತು.
ಇನ್ನು ಭವಾನಿ ಅವರ ಬಗ್ಗೆ ಹೇಳಬೇಕೆಂದರೆ ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ, ಪಾರ್ವತಿ ದಂಪತಿ ಪುತ್ರಿಯಾಗಿದ್ದು, ಪ್ರಾಥಮಿಕ ವಿದ್ಯಾಭ್ಯಾಸವನ್ನು ದಕ್ಷಿಣ ಕೊಡಗಿನ ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಮಡಿಕೇರಿ ತಾಲೂಕಿನ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ, ಮಂಗಳೂರಿನ ಸೆಂಟ್ ಅಗ್ನೇಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.
ಎಸ್‌ಸಿಸಿಯಲ್ಲಿಯೂ ಉತ್ತಮ ಸಾಧನೆ
ಪ್ರೌಢಶಾಲೆಯಿಂದಲೇ ಎನ್‌ಸಿಸಿಗೆ ಸೇರಿ ಕಾಲೇಜಿನಲ್ಲಿಯೂ ಅದನ್ನು ಮುಂದುವರೆಸಿ ವಿವಿಧ ಕ್ಯಾಂಪ್‌ಗಳಲ್ಲಿ ಭಾಗವಹಿಸಿ ತರಬೇತಿ ಪಡೆದು 2016ರಲ್ಲಿ ನವದೆಹಲಿಯ ರಾಜಪಥ್‌ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಭಾಗವಹಿಸಿದ್ದರು. ಇನ್ನು ಜೋದ್‌ಫುರ್‌ನಲ್ಲಿ ನಡೆದ ವಾಯುದಳದ ಅಖಿಲ ಭಾರತ ವಾಯು ಸೈನಿಕ್ ಶಿಬಿರದಲ್ಲೂ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್‌ಸಿಸಿಯ ಡೈರೆಕ್ಟರ್ ಜನರಲ್ ಲೆ.ಜ.ಅನಿರುದ್ಧ್ ಚಕ್ರವರ್ತಿ, ಕರ್ನಾಟಕ, ಗೋವಾ ಎನ್‌ಸಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಸಿ.ರಾಜೀವ್ ಅವರ ಶ್ಲಾಘನೆಗೆ ಪಾತ್ರರಾಗಿದ್ದರು.
ಪರ್ವಾತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಪ್ರಾಥಮಿಕ ತರಬೇತಿಯನ್ನು ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ಸ್‌ಟ್ಯೂಟ್ ಆಫ್ ಮೌಂಟೇನರಿಂಗ್ ಆಲೈಡ್ ಸ್ಪೋರ್ಟ್ಸ್ (ಎಬಿವಿಐಎಂಎಎಸ್)ನಲ್ಲಿ ಮತ್ತು ಹೆಚ್ಚಿನ ತರಬೇತಿಯನ್ನು ಡಾರ್ಜಲಿಂಗ್‌ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ (ಹೆಚ್‌ಎಂಐ)ನಲ್ಲಿ ಪಡೆದರು. 2018ರಲ್ಲಿ ಯೂರೋಪ್ ದೇಶಗಳ ಪೈಕಿ ಎತ್ತರದ ಒಂದನೇ ಪರ್ವತ ಹಾಗೂ ರಷ್ಯಾದ ಅತಿ ಎತ್ತರದ ಹಿಮಚ್ಚಾದಿತ ಪರ್ವತ ಎಲ್ ಬ್ರಸ್‌ನ್ನು ನಿರಂತರವಾಗಿ ಸುಮಾರು 8 ಗಂಟೆಗಳ ಕಾಲ ಏರಿ ತುತ್ತ ತುದಿಯಲ್ಲಿ ಭಾರತದ ಬಾವುಟವನ್ನು ಹಾರಿಸಿದ್ದರು.
ಸಹಕಾರ ಹಾರೈಕೆ ಬಯಸುವ ಭವಾನಿ
ಬಳಿಕ ಸ್ಕೀಯಿಂಗ್‌ನತ್ತ ಗಮನಹರಿಸಿದ ಅವರು ಅದಕ್ಕೆ ಬೇಕಾದ ತರಬೇತಿಯನ್ನು ಭಾರತದ ಗುಲ್ಮಾರ್ಗ್ ಮತ್ತು ಕಾಶ್ಮೀರದಲ್ಲಿ ಪಡೆದಿದ್ದರು. ಅಲ್ಲದೆ, ಹೆಚ್ಚಿನ ತರಬೇತಿಯನ್ನು 2019ರಲ್ಲಿ ನ್ಯೂಜಿಲ್ಯಾಂಡ್‌ನ ಮೌಂಟ್ ರೂಪೇವ್‌ನಲ್ಲಿ ಪಡೆದು ಬಂದಿದ್ದರು. ಈ ಹಿಂದೆ ಉತ್ತರಕಾಂಡ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಆಲ್‌ಪೈನ್ ಸ್ಕೀಯಿಂಗ್ ಮತ್ತು ನಾರ್ಡಿಕ್ ಸ್ಕೀಯಿಂಗ್‌ನ 10 ಕಿಲೋ ಮೀಟರ್‌ನ ಕ್ರಾಸ್ ಕಂಟ್ರಿಯಲ್ಲಿ ಭಾಗವಹಿಸಿ ಕರ್ನಾಟಕದ ಪತಾಕೆಯನ್ನು ಹಾರಿಸಿದ್ದರು.
ಕಳೆದ ವರ್ಷ ಜಮ್ಮು-ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆದ ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್‌ಶಿಪ್-2022ರಲ್ಲಿ ಒಂದು ಚಿನ್ನದ ಪದಕ ಮತ್ತು ಎರಡು ಬೆಳ್ಳಿ ಪದಕವನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಒಟ್ಟಾರೆ ಹೇಳಬೇಕೆಂದರೆ ಒಂದಲ್ಲ ಒಂದು ರೀತಿಯ ಸಾಧನೆ ಮಾಡುತ್ತಲೇ ಬರುತ್ತಿರುವ ಭವಾನಿಯ ಮುಂದಿನ ಉದ್ದೇಶ 2026ರಲ್ಲಿ ಇಟಲಿಯಲ್ಲಿ ನಡೆಯಲಿರುವ ಒಲಂಪಿಕ್ಸ್‌ನಲ್ಲಿ ಭಾಗವಹಿಸುವುದಾಗಿದೆ. ಅದಕ್ಕಾಗಿ ಎಲ್ಲರ ಸಹಕಾರ, ಹಾರೈಕೆಯನ್ನು ಅವರು ಬಯಸುತ್ತಿದ್ದಾರೆ.












Click it and Unblock the Notifications