Team India Coach: ಭಾರತ ತಂಡದ ಕೋಚ್ ಆಗುವ ಬಗ್ಗೆ ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್
ಭಾರತ ತಂಡದ ಮುಂದಿನ ಕೋಚ್ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಬಿಸಿಸಿಐ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಇತ್ತೀಚೆಗೆ ತಾನೆ ಅರ್ಜಿ ಆಹ್ವಾನಿಸಿತ್ತು. ಭಾರತ ಮತ್ತು ವಿದೇಶಗಳ ಮಾಜಿ ಕ್ರಿಕೆಟಿಗರು ಕೂಡ ಅರ್ಜಿ ಸಲ್ಲಿಸಿ, ಭಾರತ ತಂಡದ ಕೋಚ್ ಆಗಲು ಆಸಕ್ತಿ ತೋರಿಸಿದ್ದಾರೆ.
ಬಿಸಿಸಿಐ ಮಾತ್ರ ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ಕೋಚ್ ಆಗಿ ನೇಮಕ ಮಾಡಲು ಆಸಕ್ತಿ ತೋರಿಸಿದೆ. ಐಪಿಎಲ್ 2024ರ ಪಂದ್ಯಾವಳಿಯಲ್ಲಿ ಕೆಕೆಆರ್ ತಂಡವು ಗಂಭೀರ್ ಮಾರ್ಗದರ್ಶನದಲ್ಲಿ ಚಾಂಪಿಯನ್ ಆಗಿದೆ.

ಇದೇ ಮೊದಲ ಬಾರಿಗೆ ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಹುದ್ದೆ ಬಗ್ಗೆ ಮಾತನಾಡಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೋಚ್ ಆಗುವುದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ ಎಂದು ಹೇಳುವ ಮೂಲಕ ತಾನು ಕೋಚ್ ಆಗಲು ಸಿದ್ದ ಎಂದಿದ್ದಾರೆ.
2024 ರ ಐಸಿಸಿ ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಅವಧಿ ಮುಕ್ತಾಯವಾಗಲಿದ್ದು, ಗೌತಮ್ ಗಂಭೀರ್ ಅವರು ಮುಂದಿನ ಕೋಚ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಗಂಭೀರ್ ಹೇಳಿದ್ದಿಷ್ಟು
"ಭಾರತ ತಂಡಕ್ಕೆ ತರಬೇತಿ ನೀಡಲು ನಾನು ಇಷ್ಟಪಡುತ್ತೇನೆ. ನಿಮ್ಮ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವವಿಲ್ಲ. ನೀವು 140 ಕೋಟಿ ಭಾರತೀಯರನ್ನು ಮತ್ತು ಜಗತ್ತಿನಾದ್ಯಂತ ಇರುವವರನ್ನು ಪ್ರತಿನಿಧಿಸುತ್ತಿದ್ದೀರಿ" ಎಂದು ಗಂಭೀರ್ ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡುವ ಬಗ್ಗೆ ಮತ್ತು ಅವರ ಅನುಭವದೊಂದಿಗೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡುವ ಬಗ್ಗೆ ವಿದ್ಯಾರ್ಥಿಯೊಬ್ಬರು ಅವರನ್ನು ಕೇಳಿದಾಗ, ಗಂಭೀರ್ ಪ್ರತಿಕ್ರಿಯಿಸಿದರು, "ಈ ಪ್ರಶ್ನೆಗೆ ಬಹಳಷ್ಟು ಜನರು ಕೇಳಿದರೂ ನಾನು ಉತ್ತರಿಸಲಿಲ್ಲ. ಆದರೆ ನಾನು ಈಗ ನಿಮಗೆ ಉತ್ತರಿಸಬೇಕಾಗಿದೆ.
"ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡುವವರು 140 ಕೋಟಿ ಭಾರತೀಯರು. ಎಲ್ಲರೂ ನಮಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದರೆ ಮತ್ತು ನಾವು ಅವರನ್ನು ಪ್ರತಿನಿಧಿಸಲು ಪ್ರಾರಂಭಿಸಿದರೆ, ಭಾರತ ವಿಶ್ವಕಪ್ ಗೆಲ್ಲುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ನಾವು ನಿರ್ಭೀರತಾಗಿ ಆಡಬೇಕು" ಎಂದು ಗಂಭೀರ್ ಹೇಳಿದರು.
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಗಂಭೀರ್ ಭಾರತದ ಕೋಚ್ ಆದರೆ ಉತ್ತಮ ಎಂದು ಹೇಳಿದ್ದಾರೆ.
2007ರ ವಿಶ್ವ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದ ಗಂಭೀರ್, ಕೆಕೆಆರ್ ತಂಡದ ಮೆಂಟರ್ ಆಗಿ ತಂಡವನ್ನು ಚಾಂಪಿಯನ್ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.












Click it and Unblock the Notifications