RCB: ಕನ್ನಡಿಗ ಕೆಎಲ್ ರಾಹುಲ್‌ಗೆ ಆರ್ಸಿಬಿ ನಾಯಕತ್ವ? ಇನ್ನೂ ಇಬ್ಬರು ಸ್ಫೋಟಕ ಬ್ಯಾಟರ್ಗಳು ತಂಡಕ್ಕೆ?
ಐಪಿಎಲ್ ಮೆಗಾಹರಾಜಿಗೆ ಮುನ್ನ ತಂಡದಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು, ಇನ್ಯಾರನ್ನು ಕೈಬಿಡಬೇಕು ಎಂದು ಫ್ರಾಂಚೈಸಿಗಳು ಲೆಕ್ಕಾಚಾರ ಹಾಕುತ್ತಿವೆ. ಇನ್ನು ಕೆಲವು ಆಟಗಾರರೇ ತಂಡವನ್ನು ಬಿಟ್ಟು ಹರಾಜಿಗೆ ಬರುವ ಮುನ್ಸೂಚನೆ ಕೊಟ್ಟಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಕೂಡ ಈ ಬಾರಿ ತಂಡವನ್ನು ತೊರೆಯುವುದು ಬಹುತೇಕ ಖಚಿತವಾಗಿದೆ.
ಕೆಎಲ್ ರಾಹುಲ್ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಬರುತ್ತಾರೆ ಎನ್ನುವ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಇನ್ನು ವಿಶೇಷ ಎಂದರೆ ಈ ಬಾರಿ ಅವರೇ ತಂಡದ ನಾಯಕತ್ವ ವಹಿಸುತ್ತಾರೆ ಎನ್ನುವ ಸುದ್ದಿ ಕೂಡ ಇದೆ.

ಫಾಫ್ ಡುಪ್ಲೆಸಿಸ್ ಬಳಿಕ ಆರ್ ಸಿಬಿ ತಂಡದ ನಾಯಕ ಯಾರು ಎನ್ನುವ ಪ್ರಶ್ನೆ ಇದೆ. ಅದಕ್ಕೆ ಈಗಾಗಲೇ ಆರ್ ಸಿಬಿ ಪರ್ಯಾಯ ಆಟಗಾರನ ಹುಡುಕಾಟ ಕೂಡ ನಡೆಸುತ್ತಿದೆ. ದಿನೇಶ್ ಕಾರ್ತಿಕ್ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿರುವ ಕಾರಣ ಈ ಬಾರಿ ತಂಡದಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ.
ಕೆಎಲ್ ರಾಹುಲ್‌ಗೆ ಆರ್ ಸಿಬಿ ಜೊತೆ ಭಾವನಾತ್ಮಕ ನಂಟಿದೆ. ಆರ್ ಸಿಬಿ ನನ್ನಿಷ್ಟದ ತಂಡ, ತವರಿನಲ್ಲಿ ಆಡುವುದು ಎಂದಿಗೂ ಖುಷಿ ಕೊಡುತ್ತದೆ ಎಂದು ಹಲವು ಬಾರಿ ಹೇಳಿದ್ದಾರೆ. ಇದರಿಂದ ಅವರು ತಂಡಕ್ಕೆ ವಾಪಸ್ ಬರುವ ಸಾಧ್ಯತೆ ಹೆಚ್ಚಿದೆ.
ಎಲ್‌ಎಸ್‌ಜಿ ಮೇಲೆ ಮುನಿಸು
ಮೂರು ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿರುವ ಕೆಎಲ್ ರಾಹುಲ್ 2024ರ ಐಪಿಎಲ್‌ನಲ್ಲಿ ತಂಡದ ಮಾಲೀಕರಿಂದಲೇ ಅವಮಾನಕ್ಕೊಳಗಾಗಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್‌ಎಸ್‌ಜಿ ಸೋತಿದ್ದಕ್ಕೆ ಮೈದಾನದಲ್ಲೇ ಮಾಲೀಕರ ಸಂಜೀವ್ ಗೋಯೆಂಕಾ ಕೆಎಲ್ ರಾಹುಲ್ ಮೇಲೆ ಕಿಡಿ ಕಾರಿದ್ದರು.
ಆರ್‌ಸಿಬಿಯ ಪ್ರಸ್ತುತ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಕೈಬಿಡುವ ಸಾಧ್ಯತೆ ಕಡಿಮೆ ಇದೆ. ಅವರಿಗೆ ಈಗ 40 ವರ್ಷವಾಗಿದ್ದು, 2025ರ ಐಪಿಎಲ್ ಬಳಿಕ ನಿವೃತ್ತಿಯಾಗುವ ಸಾಧ್ಯತೆ ಕೂಡ ಇದೆ. ಆರ್ ಸಿಬಿ ಪರವಾಗಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ, ಆದರೆ ಭವಿಷ್ಯದ ದೃಷ್ಟಿಯಿಂದ ಆರ್ ಸಿಬಿ ಬೇರೆ ನಾಯಕನ ಹುಡುಕಾಟದಲ್ಲಿದ್ದು, ಕೆಎಲ್ ರಾಹುಲ್ ಉತ್ತಮ ಆಯ್ಕೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಮತ್ತೊಂದು ಸುದ್ದಿ ಎಂದರೆ ರಿಷಬ್ ಪಂತ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲು ಸಜ್ಜಾಗಿದ್ದು ಸಿಎಸ್‌ಕೆ ಅಥವಾ ಆರ್ ಸಿಬಿ ತಂಡಕ್ಕೆ ಬರುತ್ತಾರೆ ಎನ್ನಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶಾನ್ ಕೂಡ ಆರ್ ಸಿಬಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications