India vs Australia: ಜೈಸ್ವಾಲ್, ರಾಹುಲ್ ಅಬ್ಬರ; ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟ ಮುಕ್ತಾಯವಾಗಿದ್ದು ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 218 ರನ್‌ಗಳ ಮುನ್ನಡೆ ಸಾಧಿಸಿದೆ. ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಆಸ್ಟ್ರೇಲಿಯಾ ಬೌಲರ್ ಗಳ ಬೆವರಿಳಿಸಿದ್ದಾರೆ. ಇನ್ನೂ ಮೂರು ದಿನಗಳ ಆಟ ಬಾಕಿ ಇದ್ದು, ಭಾರತಕ್ಕೆ ಈ ಪಂದ್ಯವನ್ನು ಗೆಲ್ಲುವ ಸುವರ್ಣ ಅವಕಾಶ ಸಿಕ್ಕಿದೆ.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು, ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ವೇಗಿಗಳ ಅಬ್ಬರಕ್ಕೆ ಬೆದರಿದ ಭಾರತ 150 ರನ್‌ಗಳಿಗೆ ಆಲೌಟ್ ಆಗಿತ್ತು, ಇನ್ನಿಂಗ್ಸ್ ಮುನ್ನಡೆ ಸಾಧಿಸುವ ಲೆಕ್ಕಾಚಾರದಲ್ಲಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಗೆ ಭಾರತದ ವೇಗಿಗಳು ಆಘಾತ ನೀಡಿದರು.

ಜಸ್ಪ್ರೀತ್ ಬುಮ್ರಾ 5 ವಿಕೆಟ್ ಪಡೆದರೆ, ಮೊದಲ ಟೆಸ್ಟ್ ಆಡುತ್ತಿರುವ ಹರ್ಷಿತ್ ರಾಣಾ 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಪರಿಣಾಮ ಆಸ್ಟ್ರೇಲಿಯಾ 104 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ಗಳ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 172 ರನ್ ಗಳಿಸಿದ್ದು ಒಟ್ಟಾರೆ 218 ರನ್‌ಗಳ ಮುನ್ನಡೆ ಸಾಧಿಸಿದೆ.
ಕೆಎಲ್ ರಾಹುಲ್, ಜೈಸ್ವಾಲ್ ಅಬ್ಬರ
ಮೊದಲ ಇನ್ನಿಂಗ್ಸ್‌ನಲ್ಲಿ ರನ್ ಗಳಿಸುವಲ್ಲಿ ವಿಫಲವಾಗಿದ್ದು ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯಿಂದಲೇ ಇನ್ನಿಂಗ್ಸ್ ಆರಂಭಿಸಿದರು. ಇಡೀ ದಿನ ಬ್ಯಾಟಿಂಗ್ ಮಾಡಿದ ಇಬ್ಬರು ಭಾರತ ಬೃಹತ್ ಮುನ್ನಡೆ ಸಾಧಿಸಲು ಕಾರಣವಾದರು. ಆರಂಭದಲ್ಲಿ ನಿಧಾನಗತಿಯಲ್ಲಿ ರನ್ ಗಳಿಸಿದರೂ ಬಳಿಕ ಸುಲಭವಾಗಿ ರನ್ ಗಳಿಸಲು ಆರಂಭಿಸಿದರು.
ಯಶಸ್ವಿ ಜೈಸ್ವಾಲ್ 193 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 90 ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ ಕೂಡ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ್ದು 153 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿದ್ದರು. ಈ ಜೋಡಿ ಅಜೇಯ 172 ರನ್ ಕಲೆ ಹಾಕಿದ್ದು ಎರಡನೇ ದಿನದಾಟದ ಅಂತ್ಯಕ್ಕೆ 218 ರನ್‌ಗಳ ಮುನ್ನಡೆ ಸಾಧಿಸಿದೆ.
ಮೊದಲ ದಿನ ಪರ್ತ್‌ನಲ್ಲಿ ಬರೋಬ್ಬರಿ 17 ವಿಕೆಟ್ ಬಿದ್ದರೆ ಎರಡನೇ ದಿನ ಕೇವಲ 3 ವಿಕೆಟ್ ಮಾತ್ರ ಬಿದ್ದಿವೆ. ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡಿದ್ದು, ಮೂರನೇ ದಿನ ಬೃಹತ್ ಮೊತ್ತ ಕಲೆ ಹಾಕುವ ಯೋಜನೆಯಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿ ಫೈನಲ್ ದೃಷ್ಟಿಯಿಂದ ಭಾರತಕ್ಕೆ ಈ ಟೆಸ್ಟ್ ಗೆಲ್ಲುವುದು ಮುಖ್ಯವಾಗಿದೆ.












Click it and Unblock the Notifications