RCB: ಬೆಂಗಳೂರು ನನ್ನ ಮನೆ; ಆರ್ಸಿಬಿ ಸೇರುವ ಬಗ್ಗೆ ಮೌನ ಮುರಿದ ಕೆಎಲ್ ರಾಹುಲ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಆಟಗಾರರಲ್ಲಿ ಕೆಎಲ್ ರಾಹುಲ್ ಕೂಡ ಒಬ್ಬರು. ಕಳೆದ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಜೊತೆಗಿನ ಮನಸ್ತಾಪದ ಬಳಿಕ ಅವರು ತಂಡವನ್ನು ತೊರೆಯುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಯಂತೆ ಎಲ್‌ಎಸ್‌ಜಿ ಕೆಎಲ್ ರಾಹುಲ್‌ರನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೆಎಲ್ ರಾಹುಲ್ ಮೆಗಾ ಹರಾಜಿಗೆ ಬರುತ್ತಿದ್ದಂತೆ ಅವರನ್ನು ತವರಿನ ತಂಡಕ್ಕೆ ಕರೆತನ್ನಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಕರ್ನಾಟಕದ ಕೆಎಲ್ ರಾಹುಲ್ ಆರ್ ಸಿಬಿ ತಂಡಕ್ಕಾಗಿ ಆಡಿದವರು, ಬಳಿಕ ಪಂಜಾಬ್ ಕಿಂಗ್ಸ್ ಮತ್ತು ಎಲ್‌ಎಸ್‌ಜಿ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಮತ್ತೆ ಅವರನ್ನು ಆರ್ ಸಿಬಿಗೆ ಬರಲಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ಕೆಎಲ್ ರಾಹುಲ್ ಆರ್ ಸಿಬಿ ತಂಡಕ್ಕೆ ಮರಳುವ ಬಗ್ಗೆ ಆಸಕ್ತಿಕರ ವಿಚಾರ ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಕೆಎಲ್ ರಾಹುಲ್ ಹೇಳಿದ್ದೇನು?
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ಕೆಎಲ್ ರಾಹುಲ್, ನಾನು ಆರ್‌ಸಿಬಿಗೆ ಮರಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ, ಆದರೆ ಐಪಿಎಲ್ ಹರಾಜಿನಲ್ಲಿ ಏನು ಬೇಕಾದರೂ ಆಗಬಹುದು, ಅದು ನಮ್ಮ ಕೈಯಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ.
ನಾನು ಆರ್ಸಿಬಿ ತಂಡದಲ್ಲಿ ಆಡಿದ್ದು ಹೆಚ್ಚು ಖುಷಿ ಕೊಟ್ಟಿದೆ, ಅದು ನನ್ನ ಮನೆ. ಮನೆಯಲ್ಲಿ ಎಷ್ಟು ಸಮಯ ಬೇಕಾದರೂ ಕಳೆಯಬಹುದು. ನನಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಚನ್ನಾಗಿ ತಿಳಿದಿದೆ. ಅಲ್ಲಿ ಆಡುತ್ತಾ ಬೆಳೆದಿದ್ದೇನೆ. ಆದ್ದರಿಂದ ಆರ್ ಸಿಬಿ ತಂಡದಲ್ಲಿ ಆಡುವುದು ಯಾವಾಗಲೂ ಖುಷಿ ಕೊಡುತ್ತದೆ ಎಂದು ಹೇಳಿದ್ದಾರೆ.
ನೀವು ಆರ್ ಸಿಬಿಗೆ ವಾಪಸಾತಿ ಮಾಡಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೂ ಇಷ್ಟವಿದೆ. ಬೆಂಗಳೂರು ನನಗೆ ಮನೆಯಾಗಿದೆ, ಅಲ್ಲಿನ ಜನ ನನ್ನನ್ನು ಸ್ಥಳೀಯ ಕನ್ನಡಿಗ ಎಂದು ಇಷ್ಟಪಡುತ್ತಾರೆ. ತಂಡಕ್ಕೆ ಮರಳುವುದು ನಿಜಕ್ಕೂ ಖುಷಿಯಾಗುತ್ತದೆ, ಆದರೆ ಇದು ಹರಾಜು ಯಾವ ತಂಡಕ್ಕೆ ಬೇಕಾದರೂ ಹೋಗಬಹುದು ಎಂದಿದ್ದಾರೆ.
ಕೆಎಲ್ ರಾಹುಲ್ 2013ರಲ್ಲಿ ಮೊದಲ ಬಾರಿ ಆರ್ ಸಿಬಿ ತಂಡದ ಜೊತೆ ಐಪಿಎಲ್ ಪ್ರಯಾಣ ಆರಂಭಿಸಿದರು. ಬಳಿಕ ಎರಡು ವರ್ಷ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಆಡಿದ ಅವರು, 2016ರಲ್ಲಿ ಮತ್ತೆ ಆರ್ ಸಿಬಿ ತಂಡಕ್ಕೆ ಸೇರಿದರು. 2018ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಸೇರಿದ ಅವರು, 2021ರವರೆಗೂ ತಂಡದಲ್ಲಿದ್ದರು. 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರಿದ ಅವರು ನಾಯಕನ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.












Click it and Unblock the Notifications