Khelo India 3.0: ಖೇಲೋ ಇಂಡಿಯಾ 3.0: ಭಾರತೀಯ ಕ್ರೀಡಾಪಟುಗಳ 'ಪದಕ ಬೇಟೆ' ಕನಸಿಗೆ ಆನೆ ಬಲ
Khelo India 3.0: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಖೇಲೋ 3.0 ಯೋಜನೆಯಲ್ಲಿ ಕ್ರೀಡಾ ವಿಜ್ಞಾನವು ಪ್ರಮುಖ ಅಂಶವಾಗಿ ಸೇರ್ಪಡೆಗೊಂಡಿದೆ. ಅದರ ಬಗ್ಗೆ ಡಾ.ದಿನ್ಶಾ ಪಾರ್ದಿವಾಲಾ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಡಾ.ದಿನ್ಶಾ ಪಾರ್ದಿವಾಲಾ ಅವರು ಒಬ್ಬ ಪ್ರಮುಖ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಮತ್ತು ಕ್ರೀಡಾ ವೈದ್ಯಕೀಯ ತಜ್ಞರಾಗಿದ್ದಾರೆ. ಇವರು 2024ರ ಪ್ಯಾರಿಸ್ ಒಲಿಂಪಿಕ್ಸ್ ಮತ್ತು 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ವಿನೇಶ್ ಫೋಗಟ್ಗೆ ಪದಕ ಜಸ್ಟ್ ಮಿಸ್..
ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆಲ್ಲುವುದು ಮತ್ತು ಪದಕ ತಪ್ಪಿಸಿಕೊಂಡು 4ನೇ ಸ್ಥಾನಕ್ಕೆ ಕುಸಿಯುವುದರ ನಡುವಿನ ವ್ಯತ್ಯಾಸವು ಕೇವಲ 0.1 ಸೆಕೆಂಡ್, 1 ಮಿಲಿ ಮೀಟರ್ ಅಥವಾ 100 ಗ್ರಾಂ ಆಗಿರಬಹುದು. ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು 2024ರ ಒಲಿಂಪಿಕ್ಸ್ನಲ್ಲಿ 100 ಗ್ರಾಂ ಹೆಚ್ಚುವರಿ ತೂಕದಿಂದಾಗಿ ಪದಕದ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದರು. ಇದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.
ಎಲ್ಲಾ ಕ್ರೀಡಾಪಟುಗಳು ಕೌಶಲ್ಯ ಮತ್ತು ದೈಹಿಕವಾಗಿ ಅತ್ಯುತ್ತಮರಾಗಿದ್ದರೂ ಅಂತಿಮ ಕ್ಷಣದಲ್ಲಿ ಮಾನಸಿಕ ಸ್ಥಿತಿ, ಪೋಷಕಾಂಶಗಳ ಪೂರೈಕೆ ಮತ್ತು ಹವಾಮಾನಕ್ಕೆ ತಕ್ಕಂತೆ ತಮ್ಮನ್ನು ತಾವೇ ಬದಲಾಯಿಸಿಕೊಳ್ಳುವ ವಿಧಾನವೇ ಜಯವನ್ನು ನಿರ್ಧರಿಸುತ್ತದೆ. ಈ ಸಣ್ಣ ಅಂತರವನ್ನು ಕಡಿಮೆ ಮಾಡಿ, 4ನೇ ಸ್ಥಾನದಲ್ಲಿರುವ ಕ್ರೀಡಾಪಟುವನ್ನು ಅಗ್ರಸ್ಥಾನಕ್ಕೆ ತಲುಪಿಸಲು ನೆರವಾಗುವುದೇ ಕ್ರೀಡಾ ವಿಜ್ಞಾನ.
'ವೈಜ್ಞಾನಿಕ ವಿಧಾನ ಅತ್ಯಗತ್ಯ'
ಕಳೆದ ಕೆಲವು ವರ್ಷಗಳಿಂದ ಭಾರತವು ಅಂತಾರಾಷ್ಟ್ರೀಯ ಕ್ರೀಡಾ ವಲಯದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲು ಪ್ರಯತ್ನಿಸುತ್ತಲೇ ಬಂದಿದೆ. ನಾವು ವೈಯಕ್ತಿಕ ಚಾಂಪಿಯನ್ಗಳನ್ನು ಸಂಭ್ರಮಿಸಿದೆವು, ಮೂಲಸೌಕರ್ಯಗಳನ್ನೂ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತವಾಗಿ ಪದಕಗಳನ್ನು ಗೆದ್ದು ದೊಡ್ಡ ಮಟ್ಟದ ಸಾಧನೆ ಮಾಡಲು ವೈಜ್ಞಾನಿಕ ವಿಧಾನ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಸತತವಾಗಿ ಅಧಿಪತ್ಯ ಸಾಧಿಸುವ ದೇಶಗಳು, ಪ್ರತಿಭೆಗಳನ್ನು ಆರಂಭದಲ್ಲೇ ಗುರುತಿಸಿ ಅವರಿಗೆ ವೈಜ್ಞಾನಿಕ ತರಬೇತಿಯನ್ನು ನೀಡುತ್ತವೆ. ಕ್ರೀಡಾ ಕ್ಷೇತ್ರದಲ್ಲಿ ಜಾಗತಿಕ ಯಶಸ್ಸು ಎಂಬುದು ಕೇವಲ ಪ್ರತಿಭೆಯಿಂದಷ್ಟೇ ಸಿಗುವುದಿಲ್ಲ. ಅದು ವ್ಯವಸ್ಥಿತ ಯೋಜನೆ ಮತ್ತು ತಂತ್ರಜ್ಞಾನದ ಮೂಲಕ ನಿರ್ಮಾಣಗೊಳ್ಳುತ್ತದೆ. ಪ್ರಸ್ತುತ ಭಾರತವೂ ಕೂಡ ಅಂತಹದೊಂದು ವ್ಯವಸ್ಥೆಯನ್ನು ರೂಪಿಸಲು ಪ್ರಾರಂಭಿಸಿದೆ.
ಕ್ರೀಡಾ ವಿಜ್ಞಾನದಿಂದ ಏನೆಲ್ಲಾ ಪ್ರಯೋಜನಗಳಿವೆ?
ಕೇಂದ್ರ ಸರ್ಕಾರವು ತಂದಿರುವ 'ಖೇಲೋ ಇಂಡಿಯಾ 3.0' ಯೋಜನೆಯನ್ನು 9 ಪ್ರಮುಖ ಕಾರ್ಯತಂತ್ರಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಕ್ರೀಡಾಪಟುಗಳ ತರಬೇತಿ, ಮೂಲಸೌಕರ್ಯ ಮತ್ತು ಕ್ರೀಡಾ ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದರಲ್ಲಿ ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನವು ಅತ್ಯಂತ ಪ್ರಮುಖವಾಗಿದೆ. ಅವೆರಡೂ ಇತರ ಕಾರ್ಯತಂತ್ರಗಳನ್ನು ಜೋಡಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. 2030ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು 2036ರ ಒಲಿಂಪಿಕ್ಸ್ನಲ್ಲಿ ಭಾರತವು ಹೆಚ್ಚಿನ ಪದಕಗಳನ್ನು ಗೆಲ್ಲಲು ಈ ಯೋಜನೆಯು ಹೆಚ್ಚು ನೆರವಾಗಲಿದೆ.
ಖೇಲೋ ಇಂಡಿಯಾ 3.0 ಯೋಜನೆಯಡಿ, ಪ್ರತಿಯೊಬ್ಬ ಕ್ರೀಡಾಪಟುವಿನ ಕ್ರೀಡಾ ಪಯಣವನ್ನು ದಾಖಲಿಸಲು ಸಮಗ್ರ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಇದರ ಮೂಲಕ ಕ್ರೀಡಾಪಟುಗಳ ನೋಂದಣಿ, ತರಬೇತಿ, ಸ್ಪರ್ಧೆಗಳು, ಪೋಷಕಾಂಶಗಳ ಸೇವನೆ ಮತ್ತು ಅವರ ವೈದ್ಯಕೀಯ ಇತಿಹಾಸವನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
ಒಬ್ಬ ಕ್ರೀಡಾಪಟು ಒಂದು ಅಕಾಡೆಮಿಯಿಂದ ಮತ್ತೊಂದು ರಾಷ್ಟ್ರೀಯ ಶಿಬಿರಕ್ಕೆ ಸ್ಥಳಾಂತರಗೊಂಡಾಗ, ಅವರ ಹಿಂದಿನ ಗಾಯಗಳು ಮತ್ತು ಚಿಕಿತ್ಸಾ ವಿಧಾನಗಳ ವಿವರಗಳು ಬಿಟ್ಟುಹೋಗದಂತೆ ಈ ಡಿಜಿಟಲ್ ವ್ಯವಸ್ಥೆಯು ನೆರವಾಗುತ್ತದೆ. ಇದರ ಮೂಲಕ ವೈದ್ಯರು ಮತ್ತು ತರಬೇತುದಾರರು ಕ್ರೀಡಾಪಟುಗಳ ದೈಹಿಕ ಸ್ಥಿತಿಯನ್ನು ಮುಂಚಿತವಾಗಿಯೇ ಅಂದಾಜಿಸಿ ಗಾಯಗಳಾಗದಂತೆ ತಡೆಯಲು ಸಾಧ್ಯವಾಗುತ್ತದೆ.
ಕ್ರೀಡಾ ವಿಜ್ಞಾನ ಎಂಬುದು ಕೇವಲ ಕೆಲವು ಉನ್ನತ ಮಟ್ಟದ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ, ಎಲ್ಲಾ ಹಂತದ ಕ್ರೀಡಾಪಟುಗಳ ದಿನನಿತ್ಯದ ತರಬೇತಿಯ ಭಾಗವಾಗಬೇಕು. ವ್ಯಾಯಾಮ, ಬಯೋಮೆಕಾನಿಕ್ಸ್, ಪೋಷಕಾಂಶ, ಕ್ರೀಡಾ ಮನೋವಿಜ್ಞಾನ, ಫಿಸಿಯೋಥೆರಪಿ, ದೈಹಿಕ ಸಾಮರ್ಥ್ಯ ಇವೆಲ್ಲವೂ ಒಂದಾಗಿ ಪ್ರತಿಯೊಬ್ಬ ಕ್ರೀಡಾಪಟುವಿನ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ತರಬೇತಿ ಯೋಜನೆಗಳನ್ನು ರೂಪಿಸಬೇಕು.
ಮಾನಸಿಕ ಆಲೋಚನೆಗಳು ಮತ್ತು ಸಲಹೆಗಳು ಕ್ರೀಡಾಪಟುಗಳ ಒತ್ತಡವನ್ನು ಕಡಿಮೆ ಮಾಡಿ, ಅಂತಿಮ ಸ್ಪರ್ಧೆಗಳಲ್ಲಿ ಆತಂಕವಿಲ್ಲದೆ ಆಡಲು ನೆರವಾಗುತ್ತವೆ. ಅದೇ ರೀತಿ ಬಯೋಮೆಕಾನಿಕ್ಸ್ ವಿಶ್ಲೇಷಣೆಯು ಕ್ರೀಡಾಪಟುಗಳ ದೈಹಿಕ ಚಲನವಲನಗಳನ್ನು ಸರಿಪಡಿಸಿ ಉತ್ತಮ ಫಲಿತಾಂಶಗಳನ್ನು ನೀಡಲು ಹಾದಿ ಮಾಡಿಕೊಡುತ್ತದೆ.
ಕ್ರೀಡಾಪಟುಗಳು ತಮ್ಮ ಗರಿಷ್ಠ ಸಾಮರ್ಥ್ಯವನ್ನು ಪ್ರದರ್ಶಿಸುವಾಗ ಗಾಯಗಳಾಗುವುದು ಸಹಜ. ಆದರೆ, ಸೂಕ್ತ ಶರೀರಶಾಸ್ತ್ರ, ಪೋಷಕಾಂಶ ಮತ್ತು ವ್ಯಾಯಾಮ ವಿಜ್ಞಾನದ ಮೂಲಕ ಗಂಭೀರ ಗಾಯಗಳಾಗುವುದನ್ನು ಗಣನೀಯವಾಗಿ ತಡೆಯಬಹುದು. ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿ, ಅವರಿಗೆ ಅಗತ್ಯವಿರುವ ವಿಶ್ರಾಂತಿ ಮತ್ತು ದೈಹಿಕ ಸಾಮರ್ಥ್ಯ ಮರುಪಡೆಯುವ ತರಬೇತಿಗಳನ್ನು ನೀಡುವ ಮೂಲಕ ಅವರ ಕ್ರೀಡಾ ಪ್ರದರ್ಶನವನ್ನು ಮುಂದಿನ ಸ್ಪರ್ಧೆಗಳಲ್ಲೂ ಸ್ಥಿರವಾಗಿ ಕಾಯ್ದುಕೊಳ್ಳಬಹುದು.
ಕ್ರೀಡಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಕ್ರೀಡಾಪಟುಗಳಿಗೆ ಅತ್ಯುತ್ತಮ ತರಬೇತುದಾರರು, ಫಿಸಿಯೋಥೆರಪಿಸ್ಟ್ಗಳು, ಕ್ರೀಡಾ ವಿಜ್ಞಾನಿಗಳು ಮತ್ತು ಪೋಷಕಾಂಶ ತಜ್ಞರ ಅಗತ್ಯವಿದೆ. ಇದಕ್ಕಾಗಿ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಹಾಗೂ ಲಕ್ಷ್ಮೀಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಡಿಜಿಟಲ್ ಶಿಕ್ಷಣ ಮತ್ತು ರಾಷ್ಟ್ರೀಯ ಮಟ್ಟದ ಪ್ರಮಾಣಪತ್ರ ಕೋರ್ಸ್ಗಳನ್ನು ನೀಡಲಾಗುವುದು. ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಉದ್ದೇಶಗಳಿಗೆ ಅನುಗುಣವಾಗಿದೆ ಎಂದು ನೋಡಲಾಗುತ್ತದೆ.
ಕ್ರೀಡಾ ವಿಜ್ಞಾನವನ್ನು ಖೇಲೋ ಇಂಡಿಯಾ 3.0 ಯೋಜನೆಯ ಕೇಂದ್ರ ಬಿಂದುವನ್ನಾಗಿ ಮಾಡುವುದರ ಮೂಲಕ, ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳಿಗೂ ಜಾಗತಿಕ ಮಟ್ಟದ ವೈಜ್ಞಾನಿಕ ತರಬೇತಿ ದೊರೆಯಲು ಹಾದಿ ಸುಗಮವಾಗಿದೆ. ವ್ಯವಸ್ಥಿತ ಯೋಜನೆ ಮತ್ತು ನಿರಂತರ ಪರಿಶ್ರಮದಿಂದಾಗಿ ಭಾರತೀಯ ಕ್ರೀಡಾ ಕ್ಷೇತ್ರವು ಭವಿಷ್ಯದಲ್ಲಿ ದೊಡ್ಡ ಸಾಧಬೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.


Click it and Unblock the Notifications
