Karun Nair: ಆರ್ಸಿಬಿ ಸೇರ್ತಾರ ಕರ್ನಾಟಕದ ಕರುಣ್ ನಾಯರ್?
ಕರುಣ್ ನಾಯರ್, ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗ. ಭಾರತ ತಂಡದ ಆಯ್ಕೆದಾರರಿಂದ ಕಡೆಗಣಿಸಲ್ಪಟ್ಟ ಆಟಗಾರ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರನಾದರು ಅವಕಾಶಗಳಿಗಾಗಿ ಒದ್ದಾಡಿದ್ದೇ ಹೆಚ್ಚು. ಆದರೂ ಕರುಣ್ ತಮ್ಮ ಆಟವನ್ನು ಸುಧಾರಿಸಿಕೊಳ್ಳುತ್ತಲೇ ಬಂದವರು. ಟಿ20 ಮಾದರಿಯಲ್ಲಿ ಕರುಣ್ ಏನೂ ಉತ್ತಮ ಆಟಗಾರನಲ್ಲ ಎನ್ನುವ ಆರೋಪವನ್ನೇ ಸವಾಲಾಗಿ ಸ್ವೀಕರಿಸಿ, ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಅಳವಡಿಸಿಕೊಂಡು ಗೆದ್ದಿದ್ದಾರೆ.
ಸದ್ಯ ನಡೆಯುತ್ತಿರುವ ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಕರುಣ್ ನಾಯರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕರುಣ್ ನಾಯರ್ ಎರಡನೇ ಸ್ಥಾನದಲ್ಲಿದ್ದಾರೆ.

ಮಹಾರಾಜ ಟ್ರೋಫಿ 2024ರ ಪಂದ್ಯಾವಳಿಯಲ್ಲಿ ಕರುಣ್ ನಾಯರ್, 11 ಪಂದ್ಯಗಳಲ್ಲಿ 54.89 ಸರಾಸರಿಯಲ್ಲಿ, 187.12 ಸ್ಟ್ರೈಕ್‌ರೇಟ್‌ನಲ್ಲಿ 494 ರನ್ ಗಳಿಸಿದ್ದಾರೆ. ಇದರಲ್ಲಿ 52 ಬೌಂಡರಿ, 27 ಭರ್ಜರಿ ಸಿಕ್ಸರ್ ಸೇರಿವೆ. 4 ಅರ್ಧಶತಕ ಮತ್ತು ಒಂದು ಶತಕವನ್ನು ಕೂಡ ಬಾರಿಸಿದ್ದಾರೆ.
ಮೆಗಾಹರಾಜಿನಲ್ಲಿ ಅದೃಷ್ಟ ಖುಲಾಯಿಸುತ್ತಾ?
2024ರ ಐಪಿಎಲ್ ಹರಾಜಿನಲ್ಲಿ ಯಾವ ತಂಡವೂ ಕರುಣ್ ನಾಯರ್ ಅವರನ್ನು ಖರೀದಿ ಮಾಡಲು ಆಸಕ್ತಿ ತೋರದ ಕಾರಣ ಹರಾಜಾಗದೆ ಉಳಿದುಕೊಂಡರು. ಆದರೂ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುವ ಅವಕಾಶ ಪಡೆದರು. ರಣಜಿಯಲ್ಲಿ ವಿದರ್ಭ ತಂಡಕ್ಕಾಗಿ ಆಡಿದರು. ರಣಜಿಯಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದು, ಮಹಾರಾಜ ಟ್ರೋಫಿಯಲ್ಲಿ ತಾವು ಪಕ್ಕಾ ಟಿ20 ಬ್ಯಾಟರ್ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.
ಕರ್ನಾಟಕದ ಬ್ಯಾಟರ್, ಅನುಭವಿ ಆಟಗಾರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಅನುಭವ ಇರುವ ಕಾರಣ ಆರ್ ಸಿಬಿ ಐಪಿಎಲ್ ಮೆಗಾ ಹರಾಜಿನಲ್ಲಿ ಕರುಣ್ ನಾಯರ್ ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚಿಂತಿಸಬಹುದು.
ಕರುಣ್ ನಾಯರ್ ಆರ್ ಸಿಬಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಬಲ ತುಂಬುವ ಸಾಮರ್ಥ್ಯ ಹೊಂದಿದ್ದಾರೆ. ಆರ್ ಸಿಬಿ ಈವರೆಗೂ ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್, ಗ್ರೀನ್‌ರಂತಹ ವಿದೇಶಿ ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಆಯ್ಕೆ ಇಲ್ಲದಂತಾಗುತ್ತಿದೆ. ಭಾರತೀಯ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೆ ಉತ್ತಮ ವಿದೇಶಿ ಬೌಲರ್ ಗಳನ್ನು ಆಡಿಸಲು ಕೂಡ ಅವಕಾಶ ಸಿಗುತ್ತದೆ.
ಆರ್ ಸಿಬಿ ಮ್ಯಾನೇಜ್‌ಮೆಂಟ್‌ನಲ್ಲಿ ಈ ಬಾರಿ ಬದಲಾವಣೆಯಾಗಿದೆ. ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿದ್ದು, ಸ್ಥಳೀಯ ಆಟಗಾರರ ಬಗ್ಗೆ ಹೆಚ್ಚು ಮಾಹಿತಿ ಇರುತ್ತದೆ. ಅವರೇನಾದರೂ ಕರುಣ್ ನಾಯರ್ ಅವರ ಆಯ್ಕೆಯನ್ನು ಪರಿಗಣಿಸಿದರೆ, ಮತ್ತೊಬ್ಬ ಕರ್ನಾಟಕದ ಆಟಗಾರ ಆರ್ ಸಿಬಿಗೆ ಆಡಬಹುದಾಗಿದೆ.












Click it and Unblock the Notifications