SMAT 2024: ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ನಡುವೆಯೂ ಸೋತ ಕರ್ನಾಟಕ
ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024ರ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡಕ್ಕೆ ಸೋಲಿನ ಆಘಾತ ಎದುರಾಗಿದೆ. ಮಂಗಳವಾರ ನಡೆದ ಬರೋಡಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಸೋಲು ಕಂಡಿದೆ. ಈ ಮೂಲಕ ನಾಕ್ ಔಟ್ ಹಂತಕ್ಕೆ ತಲುಪುವ ಅವಕಾಶ ಬಹುತೇಕ ಕಮರಿದೆ. ಕಳೆದ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ ಬರೋಡಾ ಎದುರು ಗೆಲುವಿನ ಸನಿಹದಲ್ಲಿ ಮುಗ್ಗರಿಸಿತು.
ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರೂ ಅಂತಿಮವಾಗಿ ಸವಾಲಿನ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಮನೀಶ್ ಪಾಂಡೆ 10 ರನ್ ಗಳಿಸಿದರೆ, ಮಯಾಂಕ್ ಅಗರ್ವಾಲ್ 1 ರನ್ ಗಳಿಸಿ ಔಟಾದರು.

ಕೆ. ಶ್ರೀಜಿತ್ 9 ಎಸೆತಗಳಲ್ಲಿ 22 ರನ್ ಗಳಿಸಿದರು, ಎಸ್ ರವಿಚಂದ್ರನ್ 38 ರನ್, ಶ್ರೇಯಸ್ ಗೋಪಾಲ್ 16 ಎಸೆತಗಳಲ್ಲಿ 56 ರನ್ ಗಳಿಸಿದರು. ಅಭಿನವ್ ಮನೋಹರ್ 34 ಎಸೆತಗಳಲ್ಲಿ 6 ಸಿಕ್ಸರ್ ಸಹಿತ ಅಜೇಯ 56 ರನ್ ಗಳಿಸಿ ಕರ್ನಾಟಕ ತಂಡಕ್ಕೆ ನೆರವಾದರು. ಶುಭಾಂಗ್ ಹೆಗ್ಡೆ 4 ರನ್, ಮನೋಜ್ ಭಾಂಡಗೆ 1 ರನ್, ವಿಜಯ್‌ಕುಮಾರ್ ವೈಶಾಖ್ 5 ರನ್ ಗಳಿಸಿದರು. ಅಂತಿಮವಾಗಿ ಕರ್ನಾಟಕ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತು.
ಬರೋಡಾ ನಾಯಕ ಕೃನಾಲ್ ಪಾಂಡ್ಯ 3 ಓವರ್ ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಎ ಸೇಠ್ 2 ವಿಕೆಟ್ ಪಡೆದರೆ, ಮೇರಿವಾಲ, ಆಕಾಶ್ ಮಾಹಾರಾಜ್ ಸಿಂಗ್ ತಲಾ 1 ವಿಕೆಟ್ ಪಡೆದರು.
ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್
170 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ ಬರೋಡಾಗೆ ಶಶ್ವಾಂತ್ ರಾವತ್ ಸ್ಫೋಟಕ ಆರಂಭ ಒದಗಿಸಿದರು. 37 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ ಸಹಿತ 63 ರನ್ ಗಳಿಸಿದರು. ಅಭಿಮನ್ಯು ಸಿಂಗ್ 6 ರನ್ ಗಳಿಸಿ ಔಟಾದರೆ, ಭಾನು ಪನಿಯಾ 24 ಎಸೆತಗಳಲ್ಲಿ 42 ರನ್ ಗಳಿಸಿ ಬರೋಡಾ ಗೆಲುವು ಸುಲಭವಾಗಿಸಿದರು.
ಬರೋಡಾ ಸುಲಭ ಗೆಲುವು ಸಾಧಿಸುತ್ತದೆ ಎನ್ನುವಾಗಲೇ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಪಂದ್ಯದಲ್ಲಿ ಟ್ವಿಸ್ಟ್ ಕೊಟ್ಟರು. ಭಾನು ಪಣಿಯಾ, ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಪಡೆದ ಸಾಧನೆ ಮಾಡಿದರು.
ಆದರೆ ಶೈವಿಕ್ ಶರ್ಮಾ 22 ರನ್, ವಿಷ್ಣು ಸೋಲಂಕಿ ಅಜೇಯ 28 ರನ್ ಗಳಿಸುವ ಮೂಲಕ ಬರೋಡಾಗೆ ಸುಲಭ ಗೆಲುವ ತಂದುಕೊಟ್ಟರು.












Click it and Unblock the Notifications