Vijay Hazare Trophy: ಸೌರಾಷ್ಟ್ರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿ ಸರಣಿಯಲ್ಲಿ ಕರ್ನಾಟಕ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಅಹಮದಾಬಾದ್‌ನ ಎಡಿಎಸ್‌ಎ ರೈಲ್ವೆ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಸೌರಾಷ್ಟ್ರ ವಿರುದ್ಧ 60 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ವಾಸುಕಿ ಕೌಶಿಕ್ ಮಾರಕ ಬೌಲಿಂಗ್ ರಾಜ್ಯದ ಗೆಲುವಿಗೆ ನೆರವಾಯಿತು.
ಟಾಸ್ ಗೆದ್ದ ಸೌರಾಷ್ಟ್ರ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 349 ರನ್ ಕಲೆಹಾಕಿತು. ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಸೌರಾಷ್ಟ್ರ 47.5 ಓವರ್ ಗಳಲ್ಲಿ 289 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.

ಮಯಾಂಕ್, ಅನೀಶ್ ಭರ್ಜರಿ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಉತ್ತಮ ಆರಂಭ ಪಡೆಯಿತು. ನಾಯಕ ಮಯಾಂಕ್ ಅಗರ್ವಾಲ್ ಮತ್ತು ನಿಕಿನ್ ಜೋಸ್ ಮೊದಲ ವಿಕೆಟ್‌ಗೆ 41 ರನ್ ಕಲೆಹಾಕಿದರು. ನಿಕಿನ್ ಜೋಸ್ 34 ರನ್ ಗಳಿಸಿ ಔಟಾದರು. ಬಳಿಕ ಮಯಾಂಕ್ ಅಗರ್ವಾಲ್‌ಗೆ ಜೊತೆಯಾದ ಅನೀಶ್ 2ನೇ ವಿಕೆಟ್‌ಗೆ 137 ರನ್ ಕಲೆಹಾಕಿದರು.
ಮಯಾಂಕ್ ಅಗರ್ವಾಲ್ 65 ಎಸೆತಗಳಲ್ಲಿ 69 ರನ್ ಗಳಿಸಿದರೆ, ಅನೀಶ್ ಕೆವಿ 83 ಎಸೆತಗಳಲ್ಲಿ 93 ರನ್ ಗಳಿಸಿದರು. ಸ್ಮರಣ್ ರವಿಚಂದ್ರನ್ 40 ಎಸೆತಗಳಲ್ಲಿ 40 ರನ್ ಗಳಿಸಿದರು. ಅಭಿನವ್ ಮನೋಹರ್ 28 ಎಸೆತಗಳಲ್ಲಿ 2 ಬೌಂಡರಿ ಮೂರು ಸಿಕ್ಸರ್ ಸಹಿತ ಅಜೇಯ 44 ರನ್ ಗಳಿಸಿ ಮಿಂಚಿದರು. ಹಾರ್ದಿಕ್ ರಾಜ್ ಕೂಡ 15 ಎಸೆತಗಳಲ್ಲಿ 27 ರನ್ ಗಳಿಸಿದರು.
ಹಾರ್ವಿಕ್ ದೇಸಾಯಿ ಹೋರಾಟ ವ್ಯರ್ಥ
ಈ ಸವಾಲಿನ ಮೊತ್ತ ಬೆನ್ನತ್ತಿದ ಸೌರಾಷ್ಟ್ರ ತಂಡಕ್ಕೆ ಹಾರ್ವಿಕ್ ದೇಸಾಯಿ ಉತ್ತಮ ಆರಂಭ ನೀಡಿದರು. 102 ಎಸೆತಗಳಲ್ಲಿ 114 ರನ್ ಗಳಿಸಿದರೂ ಅವರಿಗೆ ಬೇರೆ ಆಟಗಾರರು ಸಾಥ್ ನೀಡದ ಕಾರಣ ಸೌರಾಷ್ಟ್ರ ಸೋಲೊಪ್ಪಿಕೊಂಡಿತು. ತರಂಗ್ ಗೋಹೆಲ್ 33 ರನ್, ಜಯ್ ಗೋಹಿಲ್ 40 ರನ್, ಅರ್ಪಿತ್ ವಸವಾಡ 40 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಕಡಿಮೆ ರನ್ ಗಳಿಸಿ ಔಟಾದರು.
ವೇಗಿ ವಾಸುಕಿ ಕೌಶಿಕ್ 5 ವಿಕೆಟ್ ಪಡೆಯುವ ಮೂಲಕ ಸೌರಾಷ್ಟ್ರಕ್ಕೆ ಶಾಕ್ ಕೊಟ್ಟರು. ಶ್ರೇಯಸ್ ಗೋಪಾಲ್ 4 ವಿಕೆಟ್ ಪಡೆದರೆ, ವಿದ್ಯಾಧರ್ ಪಾಟೀಲ್ 1 ವಿಕೆಟ್ ಪಡೆದರು.












Click it and Unblock the Notifications