Champions Trophy 2025: ಕನ್ನಡಿಗನಿಗೆ 'ಪ್ಲೇಯರ್ ಆಫ್ ದಿ ಸಿರೀಸ್' ಪ್ರಶಸ್ತಿ
ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತ ಒಟ್ಟಾರೆ ಮೂರು ಬಾರಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದಂತಾಗಿದೆ. 2002ರಲ್ಲಿ ಭಾರತ-ಶ್ರೀಲಂಕಾ ಜಂಟಿ ವಿಜೇತರಾಗಿದ್ದರೆ, 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು, 12 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಿದೆ.
ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತ ಒಂದೂ ಪಂದ್ಯ ಸೋಲದೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ನ್ಯೂಜಿಲೆಂಡ್ ಕೂಡ ಈ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿದೆ. ಭಾರತದ ವಿರುದ್ಧ ಮಾತ್ರ ನ್ಯೂಜಿಲೆಂಡ್ ಸೋಲು ಕಂಡಿದ್ದು ಉಳಿದ ತಂಡಗಳ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ತಂಡದ ಫೀಲ್ಡಿಂಗ್ ಅದ್ಭುತವಾಗಿದ್ದು ಗ್ಲೆನ್ ಫಿಲಿಪ್ಸ್ ಹಿಡಿದ ಒಂದೊಂದು ಕ್ಯಾಚ್‌ಗಳು ಕೂಡ ಕಣ್ಣಿಗೆ ಹಬ್ಬ ಎನ್ನುವಂತಿದ್ದವು.

ನ್ಯೂಜಿಲೆಂಡ್ ಪರವಾಗಿ ಆಡುತ್ತಿರುವ ಕನ್ನಡಿಗ ರಚಿನ್ ರವೀಂದ್ರ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. 4 ಪಂದ್ಯಗಳಲ್ಲಿ 65.75 ಸರಾಸರಿಯಲ್ಲಿ 263 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 2 ಶತಕಗಳನ್ನು ಬಾರಿಸಿ ದಾಖಲೆ ಕೂಡ ಮಾಡಿದ್ದಾರೆ. ಅಲ್ಲದೆ 5 ವಿಕೆಟ್ ಕೂಡ ಪಡೆದು ಆಲ್‌ರೌಂಡರ್ ಆಗಿ ಮಿಂಚಿದ್ದಾರೆ. ಅವರ ಆಲ್‌ರೌಂಡರ್ ಪ್ರದರ್ಶನಕ್ಕಾಗಿ ಈ ಬಾರಿ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಮುನ್ನ ನಡೆದ ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ಗಾಯಗೊಂಡಿದ್ದ ರಚಿನ್ ರವೀಂದ್ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಎರಡನೇ ಪಂದ್ಯದಲ್ಲಿ ಕಣಕ್ಕಿಳಿದ ಅವರು ಚಾಂಪಿಯನ್ಸ್ ಟ್ರೋಫಿಯ ತಮ್ಮ ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದರು. ನ್ಯೂಜಿಲೆಂಡ್‌ಗೆ ಭವಿಷ್ಯದ ಸ್ಟಾರ್ ಆಟಗಾರನಾಗುವ ಎಲ್ಲಾ ಲಕ್ಷಣವನ್ನು ಕನ್ನಡಿಗ ತೋರಿಸಿದ್ದು, ಹಲವು ದಾಖಲೆಗಳನ್ನು ಮುರಿಯುವ ಸೂಚನೆ ಕೊಟ್ಟಿದ್ದಾರೆ.
ರೋಹಿತ್ ಶರ್ಮಾಗೆ ಪಂದ್ಯ ಶ್ರೇಷ್ಠ ಆಟಗಾರ
ಇಡೀ ಪಂದ್ಯಾವಳಿಯಲ್ಲಿ ರನ್ ಗಳಿಸಲು ಹೆಣಗಾಡುತ್ತಿದ್ದ ರೋಹಿತ್ ಶರ್ಮಾ ಫೈನಲ್ ಪಂದ್ಯದಲ್ಲಿ ಲಯ ಕಂಡುಕೊಂಡರು. ಸ್ಫೋಟಕ ಆರಂಭ ಒದಗಿಸಿದ ರೋಹಿತ್ ಶರ್ಮಾ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದರು. 83 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ಸಹಿತ 76 ರನ್ ಗಳಿಸುವ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಈ ಇನ್ನಿಂಗ್ಸ್‌ಗಾಗಿ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.












Click it and Unblock the Notifications