Jasprit Bumrah: ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡ್ತಾರಾ ಜಸ್ಪ್ರೀತ್ ಬುಮ್ರಾ?
ಭಾರತ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯ ರೋಚಕ ಹಂತಕ್ಕೆ ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ ಬಳಿಕ ಆಸ್ಟ್ರೇಲಿಯಾವನ್ನು 181 ರನ್‌ಗಳಿಗೆ ಆಲೌಟ್ ಮಾಡಿದ್ದು 4 ರನ್‌ಗಳ ಮುನ್ನಡೆ ಸಾಧಿಸಿತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿದೆ.
ಭಾರತ ಮೊದಲ ಇನ್ನಿಂಗ್ಸ್ ಬೌಲಿಂಗ್ ವೇಳೆ ಬೆನ್ನಿನ ಸೆಳೆತದಿಂದ ಬಳಲುತ್ತಿದ್ದ ನಾಯಕ ಜಸ್ಪ್ರೀತ್ ಬುಮ್ರಾ ಮೈದಾನದಿಂದ ಹೊರನಡೆದರು. 10 ಓವರ್ ಬೌಲಿಂಗ್ ಮಾಡಿದ್ದ ಅವರು 2 ವಿಕೆಟ್ ಪಡೆದಿದ್ದರು. ಬುಮ್ರಾ ಮೈದಾನದಿಂದ ಹೊರ ಹೋದ ಬಳಿಕ ವಿರಾಟ್ ಕೊಹ್ಲಿ ನಾಯಕನ ಜವಾಬ್ದಾರಿ ವಹಿಸಿಕೊಂಡರು. ಬುಮ್ರಾ ಅನುಪಸ್ಥಿತಿಯಲ್ಲಿ ಉತ್ತಮ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ನಿತೀಶ್ ಕುಮಾರ ರೆಡ್ಡಿ ಆಸ್ಟ್ರೇಲಿಯಾವನ್ನು ಬೇಗನೇ ಔಟ್ ಮಾಡಿದರು.

ಆಟದ ನಡುವೆಯೇ ನಾಯಕ ಜಸ್ಪ್ರೀತ್ ಬುಮ್ರಾ ಮೈದಾನದಿಂದ ಹೊರನಡೆದರು. ಬುಮ್ರಾ ಬೆನ್ನಿನ ಸೆಳೆತದಿಂದ ಬಳಲುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬುಮ್ರಾ ಮೈದಾನದಿಂದಲೇ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರೆ. ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿದ್ದು ಇದೀಗ ಸ್ಕ್ಯಾನಿಂಗ್ ವರದಿಗಾಗಿ ಕಾಯಲಾಗುತ್ತಿದೆ.
ಪ್ರಸಿದ್ಧ್ ಕೃಷ್ಣ ಹೇಳಿದ್ದೇನು?
ದಿನದ ಆಟ ಮುಗಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವೇಗಿ ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ ಅವರಿಗೆ ಬೆನ್ನು ಸೆಳೆತವಿತ್ತು. ಸ್ಕ್ಯಾನ್ ಮಾಡಿಸಿದ್ದು ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿದೆ. ವೈದ್ಯಕೀಯ ವರದಿ ಬಂದ ಬಳಿಕ ಎಲ್ಲಾ ತಿಳಿಯುತ್ತದೆ ಎಂದು ಹೇಳಿದ್ದಾರೆ. ಬುಮ್ರಾಗೆ ಗಾಯದ ಸಮಸ್ಯೆ ಹೊಸದೇನಲ್ಲ, 2022 ಮತ್ತು 2023 ರ ನಡುವೆ ಸುಮಾರು ಒಂದು ವರ್ಷ ಬೆನ್ನಿನ ಕೆಳಭಾಗದ ನೋವಿನಿಂದಾಗಿ ಕ್ರಿಕೆಟ್‌ನಿಂದ ಹೊರಗುಳಿದಿದ್ದರು.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಬುಮ್ರಾ ಭಾರತದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಸರಣಿಯಲ್ಲಿ ಈವರೆಗೆ 32 ವಿಕೆಟ್ ಪಡೆದಿದ್ದಾರೆ. ಸಿಡ್ನಿ ಟೆಸ್ಟ್‌ನಲ್ಲಿ ಭಾರತ ಗೆಲ್ಲಬೇಕು ಎಂದರೆ ಬುಮ್ರಾ ಬೌಲಿಂಗ್ ಮಹತ್ವದ ಪಾತ್ರ ವಹಿಸಲಿದೆ.
ಸದ್ಯದ ಮಾಹಿತಿ ಪ್ರಕಾರ ಬುಮ್ರಾ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಆದರೆ ಅವರು ಬೌಲಿಂಗ್ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಭಾರತ ಈಗಾಗಲೇ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿದ್ದು ಒಟ್ಟು 145 ರನ್‌ಗಳ ಮುನ್ನಡೆಯಲ್ಲಿದೆ, 250ಕ್ಕಿಂತ ಹೆಚ್ಚಿನ ಗುರಿ ನೀಡಿದರೆ ಆಸ್ಟ್ರೇಲಿಯಾವನ್ನು ಕಟ್ಟಿಹಾಕಬಹುದು ಎಂದು ಹೇಳಲಾಗಿದೆ. ಆದರೆ ಬುಮ್ರಾ ಬೌಲಿಂಗ್ ಮಾಡದೇ ಇದ್ದರೆ ಭಾರತಕ್ಕೆ ಗೆಲುವು ಕಷ್ಟವಾಗಲಿದೆ.












Click it and Unblock the Notifications