RCB: ಮತ್ತೆ ಆರ್‌ಸಿಬಿಗೆ ಮರಳುವ ಮುನ್ಸೂಚನೆ ಕೊಟ್ಟ ಸ್ಫೋಟಕ ಆಲ್‌ರೌಂಡರ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 24, 25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಲು ತಮ್ಮದೇ ಆದ ಲೆಕ್ಕಾಚಾರ ಮಾಡಿಕೊಂಡಿವೆ. ಎಲ್ಲಾ 10 ತಂಡಗಳಿಂದ 46 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ, 1,574 ಆಟಗಾರರು ಈ ಬಾರಿ ಮೆಗಾ ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆರ್‌ಸಿಬಿ ಈ ಬಾರಿ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದಲ್ಲಿ, ಈ ಬೆನ್ನಲ್ಲೇ ಮಾಜಿ ಆಲ್‌ರೌಂಡರ್ ಮತ್ತೆ ತಂಡಕ್ಕೆ ಮರಳುವ ಮುನ್ಸೂಚನೆ ಕೊಟ್ಟಿದ್ದಾರೆ.
ಆರ್‌ಸಿಬಿ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೆ ತಂಡಕ್ಕೆ ಮರಳುವ ಮುನ್ಸೂಚನೆ ಕೊಟ್ಟಿದ್ದಾರೆ. ತಂಡದಿಂದ ಕೈಬಿಟ್ಟಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಅವರು, ಫ್ರಾಂಚೈಸಿ ತಮ್ಮನ್ನು ಸಂಪರ್ಕಿಸಿ ಮಾತನಾಡಿದ್ದು, ಎಲ್ಲ ಸ್ಪಷ್ಟನೆ ಕೊಟ್ಟಿದೆ, ತಂಡದ ಆಲೋಚನೆ ಕ್ರಮ ತಿಳಿದಿದೆ ಎಂದು ಹೇಳಿದರು.

ಆರ್ ಸಿಬಿ ತಂಡವು ವಿರಾಟ್ ಕೊಹ್ಲಿ (21 ಕೋಟಿ ರೂಪಾಯಿ), ರಜತ್ ಪಾಟಿದಾರ್ (11 ಕೋಟಿ ರೂಪಾಯಿ), ಮತ್ತು ಯಶ್ ದಯಾಳ್ (5 ಕೋಟಿ ರೂಪಾಯಿ)ರನ್ನು ರಿಟೈನ್ ಮಾಡಿಕೊಂಡಿದೆ. ಇದಕ್ಕಾಗಿ 37 ಕೋಟಿ ರೂಪಾಯಿ ನೀಡಿದ್ದು, ಪರ್ಸ್‌ನಲ್ಲಿ 83 ಕೋಟಿ ರೂಪಾಯಿ ಉಳಿಸಿಕೊಂಡಿದೆ. ಮೂರು ರೈಟ್ ಟು ಮ್ಯಾಚ್ (RTM) ಕಾರ್ಡ್ ಇದ್ದು ಹರಾಜಿನಲ್ಲಿ ಹಳೆಯ ಆಟಗಾರರನ್ನು ವಾಪಸ್ ಪಡೆಯಲು ಉಪಯೋಗಿಸುವ ಸಾಧ್ಯತೆ ಇದೆ. 2021ರಿಂದ ತಂಡದ ಪ್ರಮುಖ ಆಟಗಾರನಾಗಿರುವ ಮ್ಯಾಕ್ಸ್‌ವೆಲ್‌ರನ್ನು ಮೆಗಾ ಹರಾಜಿನಲ್ಲಿ ಮತ್ತೆ ತಂಡಕ್ಕೆ ಕರೆತರುವ ಸಾಧ್ಯತೆ ಇದೆ.
ಹಾಡಿ ಹೊಗಳಿದ ಮ್ಯಾಕ್ಸ್‌ವೆಲ್
ರಿಟೆನ್ಷನ್ ಪಟ್ಟಿ ಬಿಡುಗಡೆ ಮಾಡುವ ಮೊದಲು ಫ್ರಾಂಚೈಸ್ ಪರಿಸ್ಥಿತಿಯನ್ನು ನಿರ್ವಹಿಸಿದ ವಿಧಾನವನ್ನು ಶ್ಲಾಘಿಸಿದರು. ಇಎಸ್‌ಪಿಎನ್ ಕ್ರಿಕ್‌ಇನ್ಫೋನ ಅರೌಂಡ್ ದಿ ವಿಕೆಟ್ ಕಾರ್ಯಕ್ರಮದಲ್ಲಿ ಸಂದರ್ಶನದ ವೇಳೆ ಮಾತನಾಡಿದ ಮ್ಯಾಕ್ಸ್‌ವೆಲ್, "ನನಗೆ ಮೊ ಬೊಬಾಟ್ ಮತ್ತು ಆಂಡಿ ಫ್ಲವರ್ ಅವರಿಂದ ಫೋನ್ ಕರೆ ಬಂದಿತ್ತು. ಜೂಮ್ ಕರೆಯಲ್ಲಿ ಇಬ್ಬರು ಮಾತನಾಡಿದರು. ನನ್ನನ್ನು ರಿಟೈನ್ ಮಾಡಿಕೊಳ್ಳದಿರುವ ಬಗ್ಗೆ ಮಾಹಿತಿ ಕೊಟ್ಟ ಅವರು, ಕಾರಣವನ್ನು ಕೂಡ ವಿವರಿಸಿದರು. ಅದು ನನಗೆ ಸುಂದರ ನಿರ್ಗಮನ ಸಭೆಯಾಗಿತ್ತು, ನಾವು ಅರ್ಧ ಗಂಟೆಗಳ ಕಾಲ ಮಾತನಾಡಿದೆವು. ಅವರ ತಂತ್ರ, ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು, ನನಗೆ ನಿಜಕ್ಕೂ ಸಂತೋಷವಾಯಿತು" ಎಂದು ಹೇಳಿದ್ದಾರೆ.
ಆರ್ ಸಿಬಿ ತಂಡದಲ್ಲಿ ಕೋಚಿಂಗ್ ಸಿಬ್ಬಂದಿ ಬದಲಾವಣೆ ಸೇರಿದಂತೆ ಮುಂದಿನ ಆವೃತ್ತಿಯಲ್ಲಿ ತಂಡದ ಹಿತದೃಷ್ಟಿಯಿಂದ ಬದಲಾವಣೆ ಮಾಡುತ್ತಿರುವುದನ್ನು ಒಪ್ಪಿಕೊಂಡರು. ಆದರೆ ಆರ್ ಸಿಬಿ ಜೊತೆ ತಮ್ಮ ಸಂಬಂಧ ಮುಗಿದಿಲ್ಲ ಎಂದು ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ. "ಆರ್ ಸಿಬಿ ಜೊತೆಗಿನ ಪ್ರಯಾಣವು ಮುಗಿದಿದೆ ಎಂದು ನಾನು ಹೇಳುವುದಿಲ್ಲ" ಎಂದು ಹೇಳಿದ್ದಾರೆ.
ಫ್ರಾಂಚೈಸಿ ಕೆಲವು ಸಿಬ್ಬಂದಿಯನ್ನು ಬದಲಾಯಿಸುತ್ತಿದೆ. ಆಟಗಾರರ ಜೊತೆ ಮಾತನಾಡುವ ಮೊದಲು ಅವರು ಆ ಕೆಲಸ ಮಾಡಿದ್ದಾರೆ. ಫ್ರಾಂಚೈಸಿಯ ಮನಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ, ತಂಡಕ್ಕೆ ಮರಳಲು ನಾನು ಇಷ್ಟಪಡುತ್ತೇನೆ, ಆರ್ ಸಿಬಿ ಉತ್ತಮ ಫ್ರಾಂಚೈಸಿಯಾಗಿದ್ದು, ನಾನು ಆಡಿದಷ್ಟು ಸಮಯವನ್ನು ಆನಂದಿಸಿದ್ದೇನೆ ಎಂದು ಹೇಳಿದ್ದಾರೆ.
2024ರ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಒಂಭತ್ತು ಇನ್ನಿಂಗ್ಸ್‌ಗಳಲ್ಲಿ ಅವರು 52 ರನ್ ಗಳಿಸಿದ ಅವರು, 6 ವಿಕೆಟ್ ಪಡೆದುಕೊಂಡಿದ್ದರು. ಒಂದು ಆವೃತ್ತಿ ಉತ್ತಮವಾಗಿ ಆಡದೇ ಇದ್ದರೂ ಮ್ಯಾಕ್ಸ್‌ವೆಲ್ ಸ್ಫೋಟಕ ಆಲ್‌ರೌಂಡರ್ ಎನ್ನುವುದು ಜಗತ್ತಿಗೆ ಗೊತ್ತಿದೆ. ವಿಲ್ ಜ್ಯಾಕ್ಸ್ ಮತ್ತೆ ಆರ್ ಸಿಬಿಗೆ ಮರಳುವ ಸಾಧ್ಯತೆ ಹೆಚ್ಚಾಗಿದ್ದು, ಮ್ಯಾಕ್ಸ್‌ವೆಲ್‌ಗೆ ಕೂಡ ಮಣೆ ಹಾಕುವ ಸಾಧ್ಯತೆ ಇದೆ.












Click it and Unblock the Notifications