RCB: ಈ ಮೂವರು ಅಬ್ಬರಿಸಿದರೆ ಆರ್‌ಸಿಬಿ ಕಪ್ ಗೆಲ್ಲೋದು ಪಕ್ಕಾ!
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಬಲಿಷ್ಠ ತಂಡವನ್ನುಕಟ್ಟಿದೆ. ಮೆಗಾ ಹರಾಜಿಗೆ ಮುನ್ನ ಮೂವರನ್ನು ಮಾತ್ರ ಉಳಿಸಿಕೊಂಡಿದ್ದ ಆರ್ ಸಿಬಿ ಉಳಿದ ಆಟಗಾರರನ್ನು ಕೈಬಿಟ್ಟಿತ್ತು. ವಿರಾಟ್ ಕೊಹ್ಲಿ, ಯಶ್ ದಯಾಳ್, ರಜತ್ ಪಟಿದಾರ್ ಮಾತ್ರ ತಂಡದಲ್ಲಿ ಉಳಿದಿಕೊಂಡಿದ್ದರು. ಮೆಗಾ ಹರಾಜಿನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗವನ್ನು ಬಲಪಡಿಸಿಕೊಂಡಿದ್ದು, ಉತ್ತಮ ಆಟಗಾರರನ್ನು ಖರೀದಿ ಮಾಡಿದೆ.
ಸ್ಟಾರ್ ಆಟಗಾರರ ಹಿಂದೆ ಬೀಳದೆ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರರನ್ನು ಮಾತ್ರ ಆರ್ ಸಿಬಿ ಹರಾಜಿನಲ್ಲಿ ಖರೀದಿ ಮಾಡಿದೆ. ಆರ್ ಸಿಬಿ ತಂಡ ಸೇರಿರುವ ಆಟಗಾರರ ನಡೆಯುತ್ತಿರುವ ವಿವಿಧ ಪಂದ್ಯಾವಳಿಗಳು, ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ತರಿಸಿದೆ.

2025ರ ಐಪಿಎಲ್‌ನಲ್ಲಿ ಆರ್ ಸಿಬಿ ಬಗ್ಗೆ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಆರ್ ಸಿಬಿ ಕೂಡ ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ. ಈ ಬಾರಿ ಈ ಮೂವರು ಆಟಗಾರರು ಅಬ್ಬರಿಸಿದರೆ ಆರ್ ಸಿಬಿ ಪ್ರಶಸ್ತಿ ಗೆಲ್ಲುವುದು ಸುಲಭವಾಗಲಿದೆ.
ರಜತ್ ಪಟಿದಾರ್
ಆರ್ ಸಿಬಿ ತಂಡದ ಮೂಲಕ ಭಾರತ ತಂಡಕ್ಕೂ ಆಯ್ಕೆಯಾಗಿದ್ದ ಭರವಸೆಯ ಬ್ಯಾಟರ್ ರಜತ್ ಪಟಿದಾರ್. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಮಧ್ಯಪ್ರದೇಶದ ನಾಯಕತ್ವ ವಹಿಸಿಕೊಂಡಿದ್ದ ಅವರು, ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು. ಈಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಮಧ್ಯಪ್ರದೇಶವನ್ನು ಮುನ್ನಡೆಸುತ್ತಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಪಟಿದಾರ್ ಸ್ಪಿನ್ನರ್ ಗಳ ವಿರುದ್ಧ ದೊಡ್ಡ ಹೊಡೆತಗಳನ್ನು ಹೊಡೆಯಲು ಹೆಸರಾಗಿದ್ದಾರೆ. 2024ರ ಐಪಿಎಲ್‌ನಲ್ಲಿ ಅವರು ಆಡಿದ ಇನ್ನಿಂಗ್ಸ್‌ಗಳು ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದವು. ಒತ್ತಡದ ಸಂದರ್ಭದಲ್ಲೂ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
ಈ ಬಾರಿ ಐಪಿಎಲ್‌ನಲ್ಲಿ ಸ್ಫೋಟಕ ಆರಂಭಿಕ ಬ್ಯಾಟರ್ ಇರುವ ಕಾರಣ, ರಜತ್ ಪಟಿದಾರ್ ಮಧ್ಯಮ ಕ್ರಮಾಂಕದಲ್ಲಿ ರನ್‌ರೇಟ್ ಬೀಳದಂತೆ ನೋಡಿಕೊಂಡರೆ ಸಾಕು, ತಂಡದ ಬೃಹತ್ ಮೊತ್ತ ಕಲೆಹಾಕಲು ಮತ್ತು ಬೃಹತ್ ಮೊತ್ತ ಬೆನ್ನಟ್ಟಲು ಸಹಾಯವಾಗುತ್ತದೆ.
ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್
ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್‌ರನ್ನು ಆರ್ ಸಿಬಿ 11.50 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. 2024ರ ಐಪಿಎಲ್‌ನಲ್ಲಿ ಕೆಕೆಆರ್ ಚಾಂಪಿಯನ್ ಆಗುವಲ್ಲಿ ಸಾಲ್ಟ್ ಪಾತ್ರ ಪ್ರಮುಖವಾಗಿತ್ತು, ಅವರು ಈ ಬಾರಿ ಆರ್ ಸಿಬಿಗೆ ಬಂದಿರುವುದು ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದೆ.
ಪವರ್ ಪ್ಲೇನಲ್ಲಿ ಸಾಲ್ಟ್ ಅತ್ಯುತ್ತಮ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ವೇಗದ ಬೌಲಿಂಗ್ ಅಷ್ಟೇ ಅಲ್ಲ ಸ್ಪಿನ್ನರ್ ವಿರುದ್ಧ ಕೂಡ ಉತ್ತಮವಾಗಿ ಆಡುತ್ತಾರೆ. ಕೊಹ್ಲಿ ಮತ್ತು ಸಾಲ್ಟ್ ಇನ್ನಿಂಗ್ಸ್ ಆರಂಭಿಸಿದರೆ, ಸಾಲ್ಟ್ ಒಂದು ಕಡೆ ಸ್ಪೋಟಕ ಬ್ಯಾಟಿಂಗ್ ಮಾಡಿದರೆ, ಕೊಹ್ಲಿ ಆರಂಭದಲ್ಲಿ ಎಚ್ಚರಿಕೆಯಿಂದ ಆಡಿ ಬಳಿಕ ಬೌಂಡರಿ, ಸಿಕ್ಸರ್ ಬಾರಿಸಬಹುದು. ಸಾಲ್ಟ್ ಉತ್ತಮ ವಿಕೆಟ್ ಕೀಪರ್ ಕೂಡ ಆಗಿದ್ದು ಆರ್ ಸಿಬಿಗೆ ಫೀಲ್ಡಿಂಗ್‌ನಲ್ಲೂ ಹೆಚ್ಚಿನ ಬಲ ಬಂದಂತಾಗಿದೆ.
ಜೋಶ್ ಹೇಜಲ್‌ವುಡ್ ಬೌಲಿಂಗ್
ಆರ್ ಸಿಬಿಗೆ ಬೌಲಿಂಗ್ ಯಾವಾಗಲೂ ಸಮಸ್ಯೆಯಾಗಿತ್ತು ಆದರೆ ಈ ಬಾರಿ ಜೋಶ್ ಹೇಜಲ್‌ವುಡ್, ರಸಿಕ್ ದಾರ್, ನುವಾನ್ ತುಷಾರ, ಯಶ್ ದಯಾಳ್‌ರಂತಹ ಉತ್ತಮ ವೇಗಿಗಳಿದ್ದು ತಂಡದ ಬೌಲಿಂಗ್ ಕೂಡ ಬಲಿಷ್ಠವಾಗಿ ಕಾಣುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಆರ್ ಸಿಬಿ ಬೌಲಿಂಗ್‌ಗೆ ಹೆಚ್ಚಿನ ಬಲ ತುಂಬಲಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅವರು, ಗಾಯದ ಸಮಸ್ಯೆಯಿಂದ ಮೂರು ಪಂದ್ಯ ಹೊರಗುಳಿದರು. ಐಪಿಎಲ್ ವೇಳೆಗೆ ಅವರು ಗಾಯದ ಸಮಸ್ಯೆ ಅನುಭವಿಸದೇ ಇರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.












Click it and Unblock the Notifications