IPL 2025 Auction: ಆರ್‌ಸಿಬಿ ವಿರುದ್ಧ ಉತ್ತರ ಕರ್ನಾಟಕ ಮಂದಿ ಗರಂ
ಬೆಂಗಳೂರು, ನವೆಂಬರ್ 25: ಐಪಿಎಲ್ ಟೂರ್ನಿ 2025ರ ವೇಳಾಪಟ್ಟಿ ಪ್ರಕಟವಾಗಿದೆ. ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆದ್ದಾದಲ್ಲಿ ಐಪಿಎಲ್ 2025ರ ಆಟಗಾರರ ಹರಾಜು ನಡೆಯುತ್ತಿದೆ. ಆದರೆ ಮೊದಲ ದಿನದ ಹರಾಜು ಭಾನುವಾರ ಮುಕ್ತಾಯಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ. ಆದರೆ ಅಭಿಮಾನಿಗಳಿಗೆ ಫ್ರಾಂಚೈಸಿಗಳು ದೊಡ್ಡ ಭರವಸೆಯೊಂದನ್ನು ಕೊಟ್ಟಿದ್ದು, ಸೋಮವಾರ ಯಾರನ್ನು ಖರೀದಿ ಮಾಡಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
2025ರ ಐಪಿಎಲ್ ಟೂರ್ನಿ ವೇಳಾಪಟ್ಟಿ ಘೋಷಣೆಯಾಗಿದ್ದು, ಮಾರ್ಚ್ 14 ರಿಂದ ಮೇ 25ರ ತನಕ ಪಂದ್ಯಾವಳಿ ನಡೆಯಲಿದೆ. ಜೆದ್ದಾದಲ್ಲಿ ಭಾನುವಾರ ಮೊದಲ ದಿನದ ಆಟಗಾರರ ಹರಾಜು ಪ್ರಕ್ರಿಯೆ ಮುಗಿಸಿದೆ. ಕೆ. ಎಲ್. ರಾಹುಲ್‌ರನ್ನು ಆರ್‌ಸಿಬಿ ಖರೀದಿ ಮಾಡಿಲ್ಲ. ಮೊಹಮದ್ ಸಿರಾಜ್ ಸಹ ಆರ್‌ಸಿಬಿಗೆ ಮರಳಿಲ್ಲ.

ಆರ್‌ಸಿಬಿಯ ಫ್ರಾಂಚೈಸಿಗಳು 83 ಕೋಟಿ ರೂ. ಇಟ್ಟುಕೊಂಡು ಪ್ರಮುಖ ಆಟಗಾರರನ್ನು ಖರೀದಿ ಮಾಡಿಲ್ಲ. ಇದರಿಂದಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆರ್‌ಸಿಬಿಗೆ ಬೆಂಗಳೂರು ಮಾತ್ರವಲ್ಲ ಉತ್ತರ ಕರ್ನಾಟಕ ದೇಶ ವಿದೇಶದಲ್ಲಿ ಫ್ಯಾನ್ಸ್ ಇದ್ದಾರೆ. ಆದರೆ ಭಾನುವಾರದ ಹರಾಜು ನೋಡಿದ ಬಳಿಕ 'ಈ ಸಲ ಕಪ್ ನಮ್ದೆ' ಎಂದು ಹೇಳಲು ಅಭಿಮಾನಿಗಳು ಆಲೋಚಿಸಬೇಕಿದೆ.
ಉತ್ತರ ಕರ್ನಾಟಕ ಮಂದಿ ಗರಂ: ಆಟಗಾರರ ಖರೀದಿ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ಆರ್‌ಸಿಬಿ ಫ್ಯಾನ್ಸ್ ಫ್ರಾಂಚೈಸಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ. Uttara Karnataka Special's post ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಈ ಕುರಿತು ಪೋಸ್ಟ್ ಹಾಕಲಾಗಿದೆ. ಇದಕ್ಕೆ ಅಭಿಮಾನಿಗಳು ಅಲ್ಲಿಯೇ ಕಮೆಂಟ್ ಹಾಕಿದ್ದಾರೆ. 'ಈ ಸಲ ಕಪ್ ನಮ್ದೇ
ಅಲ್ಲ, ಈ ಸಲವೂ ತಪ್ ನಮ್ದೇ' ಎಂದು ಹೇಳಿದ್ದಾರೆ.
ಫೇಸ್‌ಬುಕ್ ಪುಟದಲ್ಲಿ 'ಈ RCB ದವರ ಎದಕ್ಕ ಹೋಗ್ಯಾರ ಗೊತ್ತಾಗವಲ್ದ ಚಾಹಲ್ NA ಬಿಟ್ರು ಸಿರಾಜ್‌ನ ಬಿಟ್ರು ಪಂತ್‌ನ ಬಿಟ್ರು ಹಿಂಗ ಎಲ್ಲಾರನು ಬಿಟ್ಕೋತ ಕುಂತ್ ಬಿಡಿ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಯಾವರೇ ಆಲ್ತು ಫಾಲ್ತು PLAYERSನ ಕರ್ಕೊಂಡ್ ಬಂದ್ ಕುಂತ್ ಬಿಡ್ರಿ ನಾವು FANS ಇಲ್ಲೇ "ಈ ಸಲ ಕಪ್ ನಮ್ದೇ" ಅನ್ಕೋತಾ ಕುಂತ್ಬಿಡ್ತಿವಿ' ಎಂದು ಪೋಸ್ಟ್ ಹಾಕಿದ್ದಾರೆ.
ಈ ಪೋಸ್ಟ್‌ಗೆ ಹಲವಾರು ಕಮೆಂಟ್‌ಗಳು ಬಂದಿದ್ದು, ಆರ್‌ಸಿಬಿ ಮ್ಯಾಚ್ ನೋಡೋದ್ ಬಿಟ್ರೆ ಆಯಿತು, ಸರಿಯಾಗೆ ಬಿಡ್ ಮಾಡ್ತಿದಾರೆ, ಲಿವಿಂಗ್ಸ್ಟನ್ ಒಳ್ಳೆಯ ಆಯ್ಕೆ, ರಾಹುಲ್‌ನ ಸಹ ಬಿಟ್ರು, ತಪ್ ನಮ್ಮದೇ, ಈ ಸಲ ಕಪ್ ನಮ್ದೇ... JAI RCB ಎಂದು ಹಲವಾರು ಆರ್‌ಸಿಬಿ ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ.
ಭಾನುವಾರ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ಯಾರನ್ನು ಖರೀದಿ ಮಾಡಲಿದೆ ಎಂದು ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರಿಯರು ಕಾದು ಕುಳಿತಿದ್ದರು. ಮೊದಲ ದಿನ ಆರ್‌ಸಿಬಿ 12.50 ಕೋಟಿ ಮೊತ್ತಕ್ಕೆ ಜೋಶ್ ಹ್ಯಾಜಲ್‌ವುಡ್, 11.50 ಕೋಟಿ ಮೊತ್ತಕ್ಕೆ ಫಿಲ್ ಸಾಲ್ಟ್, 11 ಕೋಟಿ ರೂ.ಗಳಿಗೆ ಜಿತೇಶ್ ಶರ್ಮಾ ಮತ್ತು 8.75 ಕೋಟಿ ರೂ.ಗಳಿಗೆ ಲಿಯಾಮ್ ಲಿವಿಂಗ್ ಸ್ಟೋನ್ ಖರೀದಿಸಿದೆ. ಕೆ. ಎಲ್. ರಾಹುಲ್ ಬಿಟ್ಟುಕೊಟ್ಟಿದ್ದು, ಸಹ ಕನ್ನಡಿಗ ಅಭಿಮಾನಿಗಳಿಗೆ ನೋವುಂಟು ಮಾಡಿದೆ.
ಇನ್ನು ಅಭಿಮಾನಿಗಳ ಅಸಮಾಧಾನಕ್ಕೆ ಆರ್‌ಸಿಬಿ ಫ್ರಾಂಚೈಸಿಗಳು ಉತ್ತರವನ್ನು ನೀಡಿದ್ದಾರೆ. "ತಂಡದ ಯೋಜನೆ ಮತ್ತು ಫ್ರಾಂಚೈಸಿಗಳ ಯೋಜನೆಯ ಮೇಲೆ ನಂಬಿಕೆ ಇಡಿ. ತಮ್ಮ ಬಳಿ ಯೋಜನೆಯೊಂದಿದೆ, ಅದನ್ನು ನಾವು ಕಾರ್ಯಗತಗೊಳಿಸುತ್ತೇವೆ" ಎಂದು ಅಭಿಮಾನಿಗಳಿಗೆ ದೊಡ್ಡ ಭರವಸೆಯನ್ನು ನೀಡಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಫ್ರಾಂಚೈಸಿಗಳು, "ಎಲ್ಲವೂ ಮುಗಿದಿಲ್ಲ, ನಮ್ಮ ಬಳಿ ಹಲವು ಯೋಜನೆಗಳಿವೆ ಮತ್ತು ಹಣವೂ ಇದೆ. ಶಾಂತವಾಗಿರಿ ಮತ್ತು ಯೋಜನೆಗಳ ಮೇಲೆ ನಂಬಿಕೆ ಇಡಿ". "ಶಾಂತವಾಗಿರಿ ನಾವು ಯೋಜನೆಯನ್ನು ಮಾಡಿದ್ದೇವೆ" ಎಂದು ಹೇಳುವ ಮೂಲಕ ಅಭಿಮಾನಿಗಳ ಸಿಟ್ಟು ಶಮನಗೊಳಿಸುವ ಕೆಲಸವನ್ನು ಮಾಡಿದ್ದಾರೆ.
ಆಟಗಾರರ ಹರಾಜು ಆರಂಭವಾಗಿ ಎರಡು ರೌಂಡ್ ಮುಗಿದರೂ ಆರ್‌ಸಿಬಿ ಯಾರನ್ನೂ ಖರೀದಿ ಮಾಡಲಿಲ್ಲ. ಆರ್‌ಸಿಬಿಯಲ್ಲಿದ್ದ ಮೊಹಮದ್ ಸಿರಾಜ್ ಖರೀದಿ ಮಾಡಲು ಫ್ರಾಂಚೈಸಿಗಳು ಆರ್‌ಟಿಎಂ ಆಯ್ಕೆಯನ್ನು ಬಳಕೆ ಮಾಡಲಿಲ್ಲ. ಸಿರಾಜ್ 12.25 ಕೋಟಿಗೆ ಸಿರಾಜ್ ಗುಜರಾತ್ ಟೈಟಾನ್ಸ್ ಪಾಲಾದರು. ಡೆಲ್ಲಿ ಕ್ಯಾಪಿಟಲ್ 14 ಕೋಟಿ ರೂ.ಗಳಿಗೆ ಕೆ. ಎಲ್. ರಾಹುಲ್ ಖರೀದಿ ಮಾಡಿತು. ಇದು ಆರ್‌ಸಿಬಿ ಅಭಿಮಾನಿಗಳ ಕಣ್ಣು ಕೆಂಪಾಗಿಸಿತು.
ಭಾನುವಾರದ ಹರಾಜಿನಲ್ಲಿ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಖರೀದಿಯಲ್ಲಿ ದಾಖಲೆಯನ್ನು ಬರೆದಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ಪಂತ್ ಅವರನ್ನು 27 ಕೋಟಿಗೆ ಮತ್ತು ಪಂಜಾಬ್ ಶ್ರೇಯಸ್ ಅಯ್ಯರ್ ಅವರನ್ನು 26.75 ಕೋಟಿಗೆ ಖರೀದಿ ಮಾಡಿದವು.
ಚಾಹಲ್ 18 ಕೋಟಿಗೆ ಪಂಜಾಬ್, ಜೋಸ್ ಬಟ್ಲರ್ 15.75 ಕೋಟಿಗೆ ಗುಜರಾತ್ ಟೈಟನ್ಸ್, ಅರ್ಷದೀಪ್ ಸಿಂಗ್ 18 ಕೋಟಿಗೆ ಪಂಜಾಬ್ ವೆಂಕಟೇಶ್ ಅಯ್ಯರ್ 23.75 ಕೋಟಿಗೆ ಕೋಲ್ಕತ್ತ ನೈಟ್ ರೈಡರ್ಸ್ ಪಾಲಾದರು.












Click it and Unblock the Notifications