IPL 2023: ಅಕ್ಷರ್ ಪಟೇಲ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸೌರವ್ ಗಂಗೂಲಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಅಕ್ಷರ್ ಪಟೇಲ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಅವರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡುವ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಆಡಳಿತ ಮಂಡಳಿ ಚಿಂತಿಸುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಉಪನಾಯಕ ಮುಂದಿನ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಕ್ಷರ್ ಪಟೇಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರೂ, ಅಮೂಲ್ಯವಾದ ರನ್ ಗಳಿಸಿದ್ದರು. 5 ಇನ್ನಿಂಗ್ಸ್‌ಗಳಲ್ಲಿ 88 ರ ಸರಾಸರಿಯಲ್ಲಿ 264 ರನ್ ಗಳಿಸಿ ಮಿಂಚಿದರು. ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 50 ರನ್‌ಗಳಿಂದ ಸೋತಾಗ, ಅಕ್ಷರ್ ಪಟೇಲ್ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.

ಅಕ್ಷರ್ ಪಟೇಲ್ 11 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 16 ರನ್ ಗಳಿಸಿದರು. ಆದರೆ, ಅಕ್ಷರ್ ಬ್ಯಾಟಿಂಗ್‌ಗೆ ಬರುವ ವೇಳೆಗೆ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಿಡಿತದಿಂದ ಹೊರಗಿತ್ತು. ಈ ವಿಚಾರವನ್ನು ಸೌರವ್ ಗಂಗೂಲಿ ಕೂಡ ಒಪ್ಪಿಕೊಂಡರು. ಪಂದ್ಯ ಸೋತ ಬಳಿಕ ಅಭಿಮಾನಿಗಳು ಕೂಡ ಅಕ್ಷರ್ ಪಟೇಲ್‌ರನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳಿಸದ ಬಗ್ಗೆ ಪ್ರಶ್ನೆ ಮಾಡಿದ್ದರು.
ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಚರ್ಚೆ ಮಾಡಲಾಗಿದೆ
"ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಚರ್ಚೆ ಮಾಡಲಾಗಿದೆ. ಅವರ ಬ್ಯಾಟಿಂಗ್ ಸುಧಾರಣೆಯಾದಂತೆ ಕ್ರಮಾಂಕದಲ್ಲಿ ಬಡ್ತಿ ಪಡೆಯುತ್ತಾರೆ. ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಕಠಿಣ ಪಿಚ್‌ಗಳಲ್ಲಿ ಅವರು ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಅವರು ಉತ್ತಮ ರನ್ ಗಳಿಸಬಹುದು ಎಂದು ನಾನು ಭಾವಿಸುತ್ತೇನೆ. ಆದರೂ, ಅಕ್ಷರ್ ಪಟೇಲ್ ತಮ್ಮ ಬೌಲಿಂಗ್ ಅನ್ನು ಸುಧಾರಿಸಿಕೊಳ್ಳಬೇಕಿದೆ" ಎಂದು ಸೌರವ್ ಗಂಗೂಲಿ ಸಲಹೆ ನೀಡಿದರು.
"ವಿದೇಶಿ ಆಟಗಾರರು ನಿಮ್ಮ ಬೌಲಿಂಗ್‌ನಲ್ಲಿ ಬೌಂಡರಿಗಳನ್ನು ಹೊಡೆಯುತ್ತಿದ್ದರೆ ಅದು ಗಂಭೀರವಾದ ವಿಚಾರವಾಗುತ್ತದೆ. ಮೇಯರ್ಸ್, ಪೂರನ್ ಅಕ್ಷರ್ ಬೌಲಿಂಗ್‌ನಲ್ಲಿ ಸಿಕ್ಸರ್ ಗಳನ್ನು ಹೊಡೆದರು. ಅಕ್ಷರ್ ಬೌಲಿಂಗ್‌ನಲ್ಲಿ ಸುಧಾರಣೆ ಕಾಣಬೇಕಿದೆ, ಲೈನ್ ಮತ್ತು ಲೆಂಗ್ತ್‌ನಲ್ಲಿ ಉತ್ತಮವಾಗಿರಬೇಕು, ಟಿ20 ಕ್ರಿಕೆಟ್‌ನಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಬುದ್ಧಿವಂತಿಕೆಯಿಂದ ಬೌಲಿಂಗ್ ಮಾಡಬೇಕಾಗುತ್ತದೆ. ಫ್ಲಾಟ್ ಪಿಚ್‌ಗಳಲ್ಲಿ ಆಡುವಾಗ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು" ಎಂದು ಸಲಹೆ ನೀಡಿದರು.

ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ
ಮುಂದಿನ ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಸುಧಾರಣೆಯಾಗುತ್ತದೆ ಎಂದು ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಅಕ್ಷರ್ ಪಟೇಲ್ ಉತ್ತಮ ಅನುಭವ ಮತ್ತು ಸಾಮರ್ಥ್ಯ ಹೊಂದಿರುವ ಆಟಗಾರ, ಅವರು ಭಾರತ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ." ಲಕ್ನೋ ಸೂಪರ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್ ಗಳಲ್ಲಿ 38 ರನ್ ನೀಡಿ ಕೈಲ್ ಮೇಯರ್ಸ್ ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ ಪಂದ್ಯವನ್ನು ತವರಿನಲ್ಲಿ ಆಡಲಿದೆ. ಏಪ್ರಿಲ್ 4 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ವಿರುದ್ಧ ಸೆಣೆಸಲಿದ್ದಾರೆ. ಈ ಪಂದ್ಯವನ್ನು ವೀಕ್ಷಿಸಲು ರಿಷಬ್ ಪಂತ್ ಮೈದಾನಕ್ಕೆ ಆಗಮಿಸುತ್ತಿರುವುದು ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಿದೆ.












Click it and Unblock the Notifications