IPL 2023: ಅಭ್ಯಾಸ ಮಾಡಲು ಬಂದ ಧೋನಿ ನೋಡಿ ನೋಡಿ ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಮೂರು ವರ್ಷಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರಿನಲ್ಲಿ ಪಂದ್ಯವನ್ನಾಡಲು ಸಜ್ಜಾಗಿದೆ. ಮಾರ್ಚ್ 31ರಂದು ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ವಿರುದ್ಧ ಸೆಣೆಸಲಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
Nayagan meendum varaar… 💛🥳#WhistlePodu #Anbuden 🦁 pic.twitter.com/3wQb1Zxppe
— Chennai Super Kings (@ChennaiIPL) March 27, 2023
ಸಿಎಸ್‌ಕೆ ತನ್ನ ಮೊದಲ ತವರಿನ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಆಡಲಿದೆ. ಏಪ್ರಿಲ್ 3ರಂದು ಚೆಪಾಕ್ ಅಂಗಳದಲ್ಲಿ ಧೋನಿ ತವರಿನ ಅಭಿಮಾನಿಗಳ ಮುಂದೆ ಅಬ್ಬರಿಸಲು ಸಿದ್ಧವಾಗಿದ್ದಾರೆ. ಐಪಿಎಲ್ ಆರಂಭಕ್ಕೆ ಒಂದು ತಿಂಗಳ ಮುನ್ನವೇ ಧೋನಿ ಚೆನ್ನೈಗೆ ಆಗಮಿಸಿ ಸಿದ್ಧತೆ ಆರಂಭಿಸಿದ್ದರು.

ತಂಡದ ಎಲ್ಲಾ ಆಟಗಾರರು ಚೆನ್ನೈನಲ್ಲಿದ್ದು ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಸೋಮವಾರ ಧೋನಿ ಅಭ್ಯಾಸ ಮಾಡುವುದನ್ನು ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಸಾವಿರಾರು ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗನ ಆಟವನ್ನು ಕಣ್ತುಂಬಿಕೊಳ್ಳಲು ಚೆಪಾನ್‌ನಲ್ಲಿ ಜಮಾಯಿಸಿದ್ದರು. ಧೋನಿ ಮೈದಾನಕ್ಕೆ ಅಭ್ಯಾಸಕ್ಕೆ ಬರುತ್ತಿದ್ದಂತೆ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತು. ಜೋರಾಗಿ ಕೂಗುವ ಮೂಲಕ ನೆಚ್ಚಿನ ತಂಡದ ನಾಯಕನಿಗೆ ಅದ್ದೂರಿ ಸ್ವಾಗತ ಕೋರಿದರು.
ವಾಪಸಾತಿ ಮಾಡಲು ಸಜ್ಜಾದ ಸಿಎಸ್‌ಕೆ
4 ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ರವೀಂದ್ರ ಜಡೇಜಾ ನಾಯಕತ್ವದಲ್ಲಿ ತಂಡ ಹೀನಾಯ ಸೋಲು ಕಂಡ ಬಳಿಕ, ಟೂರ್ನಿಯ ಮಧ್ಯದಲ್ಲೇ ಅವರು ಗಾಯದ ಕಾರಣ ನೀಡಿ ನಾಯಕತ್ವದಿಂದ ಕೆಳಗಿಳಿದರು. ನಂತರ ಧೋನಿ ನಾಯಕತ್ವ ವಹಿಸಿಕೊಂಡರು ತಂಡದ ಪ್ರದರ್ಶನ ಸುಧಾರಿಸಲಿಲ್ಲ.
ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ಬಾರಿಯ ಸೋಲಿನ ಅವಮಾನವನ್ನು ಮರೆತು ಈ ಬಾರಿ ಮತ್ತೆ ಉತ್ತಮ ಪ್ರದರ್ಶನ ನೀಡಲು ತಂಡ ಸಜ್ಜಾಗಿದೆ. ಐಪಿಎಲ್ ಮಿನಿ ಹರಾಜಿಲ್ಲಿ ಬೆನ್‌ಸ್ಟೋಕ್ಸ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಶಕ್ತಿ ತಂದುಕೊಟ್ಟಿದೆ.

ಗೆಲುವಿನ ಮೂಲಕ ವಿದಾಯ ಹೇಳ್ತಾರ ಧೋನಿ?
ಎಂಎಸ್ ಧೋನಿಗೆ ಇದು ಕೊನೆಯ ಐಪಿಎಲ್ ಎಂದು ಹೇಳಲಾಗಿದೆ. ಧೋನಿ ಈ ಬಗ್ಗೆ ಎಲ್ಲೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ತವರಿನಲ್ಲಿ ಕೊನೆಯ ಬಾರಿ ಆಡಿದ ನಂತರ ವಿದಾಯ ಹೇಳುತ್ತಾರೆ ಎನ್ನಲಾಗಿದೆ. ತಮ್ಮ ತಂಡವನ್ನು ಚಾಂಪಿಯನ್ ಮಾಡುವ ಮೂಲಕ ವಿದಾಯವನ್ನು ಸ್ಮರಣೀಯವಾಗಿಸುವುದು ಧೋನಿ ಅವರ ಲೆಕ್ಕಾಚಾರ ಎನ್ನಲಾಗಿದೆ.
ಎಂಎಸ್ ಧೋನಿ ಸಿಎಸ್‌ಕೆ ತಂಡದ ಜೊತೆ ಭಾವನಾತ್ಮಕ ನಂಟು ಹೊಂದಿದ್ದಾರೆ. ಸಿಎಸ್‌ಕೆ ತಂಡದ ಅಭಿಮಾನಿಗಳಿಗೆ ಕೂಡ ಧೋನಿ ಎಂದರೆ ಆರಾಧ್ಯ ದೈವ, ತಮ್ಮ ನೆಚ್ಚಿನ ಆಟಗಾರನಿಗೆ ಅದ್ದೂರಿಯಾಗಿ ಸ್ವಾಗತ ಕೋರಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಟಿಕೆಟ್ ಮಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಸದ್ಯ ಭರ್ಜರಿ ಅಭ್ಯಾಸ ಮಾಡುತ್ತಿದೆ. ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ದೀಪಕ್ ಚಹಾರ್, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ಅಜಿಂಕ್ಯ ರಹಾನೆ, ಅಂಬಾಟಿ ರಾಯುಡು ಸೇರಿದಂತೆ ಪ್ರಮುಖ ಆಟಗಾರರು ಧೋನಿ ಜೊತೆಗಿನ ಅಭ್ಯಾಸದ ಅವಧಿಯಲ್ಲಿ ಭಾಗವಹಿಸಿದ್ದರು.












Click it and Unblock the Notifications