India vs West Indies T20: ತಂಡದಲ್ಲಿ ಪ್ರಮುಖ ಬದಲಾವಣೆ: ಈ ಆಟಗಾರನಿಗೆ ಕೊನೆ ಅವಕಾಶ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದು ಬೀಗಿರುವ ಭಾರತ ಸದ್ಯ ಟಿ20 ಸರಣಿಯಲ್ಲಿ ಸೋಲಿನ ಭೀತಿಯಲ್ಲಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದು ಇಂದು (ಮಂಗಳವಾರ) ಸರಣಿಯ ಮೂರನೇ ಪಂದ್ಯವನ್ನು ಆಡಲಿದೆ.
ಭಾರತ ಸರಣಿಯನ್ನು ಜೀವಂತವಾಗಿ ಇಟ್ಟುಕೊಳ್ಳಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತ ಯಾವುದೇ ದ್ವಿಪಕ್ಷೀಯ ಟಿ20 ಸರಣಿಯನ್ನು ಸೋತಿಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಮೊದಲ ಎರಡು ಪಂದ್ಯಳನ್ನು ಸೋತ ಬಳಿಕ ಮೂರನೇ ಪಂದ್ಯದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಮೊದಲ ಎರಡು ಪಂದ್ಯಗಳಲ್ಲಿ ತಂಡದ ಬೌಲಿಂಗ್ ಉತ್ತಮವಾಗಿದ್ದರೂ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಯುವ ಆಟಗಾರ ತಿಲಕ್ ವರ್ಮಾ ಹೊರತುಪಡಿಸಿ ಉಳಿದ ಯಾವ ಬ್ಯಾಟರ್ ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಮೂರನೇ ಟಿ20 ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ಬಲಪಡಿಸಲು ಬದಲಾವಣೆ ಮಾಡಲಾಗುತ್ತದೆ.
ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿರುವ ಯಶಸ್ವಿ ಜೈಸ್ವಾಲ್ ಇಂದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಿದ್ದವಾಗಿದ್ದಾರೆ. ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅವರು, ಇಂದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಪ್ರಮುಖ ಬೌಲರ್ ಕುಲದೀಪ್ ಯಾದವ್ ಹೆಬ್ಬೆರಳಿನ ಗಾಯದಿಂದ ಬಳಲುತ್ತಿರುವ ಕಾರಣ, ರವಿ ಬಿಷ್ಣೋಯ್ ತಂಡದಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಮೊದಲ ಎರಡೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಸಂಜು ಸ್ಯಾಮ್ಸನ್‌ಗೆ ಇದು ಕೊನೆಯ ಅವಕಾಶವಾಗಿದೆ.
ಆರಂಭಿಕ ಜೋಡಿಯ ವಿಫಲ
ಆರಂಭಿಕ ಜೋಡಿಯಾದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಇದುವರೆಗೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಈ ಜೋಡಿ 5 ಮತ್ತು 16 ರನ್‌ಗಳ ಜೊತೆಯಾಟ ಆಡಿದೆ. ಶುಭಮನ್ ಗಿಲ್ ಮೊದಲ ಪಂದ್ಯದಲ್ಲಿ 3 ಎರಡನೇ ಪಂದ್ಯದಲ್ಲಿ 7 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ.
ಇದರಿಂದ ಆರಂಭಿಕರಾಗಿ ಜೈಸ್ವಾಲ್ ಅವರನ್ನು ಕಣಕ್ಕಿಳಿಸುವ ಯೋಜನೆಯಲ್ಲಿದ್ದಾರೆ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕೋಚ್ ರಾಹುಲ್ ದ್ರಾವಿಡ್. ಇದರಿಂದ ಇಶಾನ್ ಕಿಶನ್ ಅಥವಾ ಶುಭಮನ್ ಗಿಲ್ ಬೆಂಚ್ ಕಾಯಬೇಕಾಗುತ್ತದೆ. ಟಿ20ಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಸೂರ್ಯಕುಮಾರ್ ಯಾದವ್ ಕೂಡ ನಿರೀಕ್ಷಿತ ಪ್ರದರ್ಶನ ನೀಡದೇ ಇರುವುದು ತಂಡದ ಚಿಂತೆಗೆ ಕಾರಣವಾಗಿದೆ.
ಇಶಾನ್ ಕಿಶನ್, ಗಿಲ್ ಇಬ್ಬರೂ ತಂಡದಲ್ಲಿ ಉಳಿದರೆ ಬೌಲರ್ ಮುಖೇಶ್ ಕುಮಾರ್ ಪ್ಲೇಯಿಂಗ್ 11ನಿಂದ ಹೊಗುಳಿಯಲಿದ್ದಾರೆ. ಇಬ್ಬರು ಸ್ಪಿನ್ ಮತ್ತು ಮೂವರು ವೇಗಿಗಳ ಜೊತೆ ಕಣಕ್ಕಿಳಿಯುವ ಸಾಧ್ಯತೆ ಇದೆ.
ಭಾರತವು ಐದು ಸದಸ್ಯರ ಬೌಲಿಂಗ್ ದಾಳಿಯೊಂದಿಗೆ ಹೋದರೆ, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಇಬ್ಬರೂ ಪೂರ್ಣ ನಾಲ್ಕು ಓವರ್‌ಗಳ ಕೋಟಾವನ್ನು ಬೌಲ್ ಮಾಡಬೇಕಾಗುತ್ತದೆ. ಇದುವರೆಗೆ ಅಕ್ಷರ್ ಮೊದಲ ಟಿ20ಯಲ್ಲಿ ಕೇವಲ ಎರಡು ಓವರ್ ಬೌಲಿಂಗ್ ಮಾಡಿದ್ದಾರೆ.
ಭಾರತ ಸಂಭಾವ್ಯ ಆಡುವ ಬಳಗ
ಇಶಾನ್ ಕಿಶನ್/ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಯುಜುವೇಂದ್ರ ಚಾಹಲ್.












Click it and Unblock the Notifications