India Vs West Indies: ಕುಲದೀಪ್, ಜಡೇಜಾ ಮೋಡಿಗೆ ತತ್ತರಿಸಿದ ವಿಂಡೀಸ್: ಭಾರತಕ್ಕೆ ಭರ್ಜರಿ ಜಯ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದ ಉತ್ಸಾಹದಲ್ಲಿದ್ದ ಭಾರತ ತಂಡ ಏಕದಿನ ಸರಣಿಯಲ್ಲೂ ಶುಭಾರಂಭ ಮಾಡಿದೆ. ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
ಬಾರ್ಬಡಾಸ್‌ನ ಕೆನ್ಸಿಂಗ್ಟನ್ ಓವಲ್ ಅಂಗಳದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಮೋಡಿ ಮಾಡಿದರು. ಇವರಿಬ್ಬರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಕೇವಲ 114 ರನ್‌ಗಳಿಗೆ ಆಲೌಟ್ ಆಯಿತು.

ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಮೊದಲು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್‌ಗೆ ಹಾರ್ದಿಕ್ ಪಾಂಡ್ಯ ಆರಂಭದಲ್ಲೇ ಆಘಾತ ನೀಡಿದರು. ಕೈಲ್ ಮೇಯರ್ಸ್ ಅವರು 2 ರನ್ ಗಳಿಸಿದ್ದಾಗ ದಾಳಿಗಿಳಿದ ಪಾಂಡ್ಯ ವಿಕೆಟ್ ಪಡೆದು ಭಾರತಕ್ಕೆ ಉತ್ತಮ ಆರಂಭ ನೀಡಿದರು. ಮುಖೇಶ್ ಕುಮಾರ್ ಮತ್ತು ಶಾರ್ದೂಲ್ ಠಾಕೂರ್ ನಂತರ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಜಡೇಜಾ, ಕುಲದೀಪ್ ಮಾರಕ ಬೌಲಿಂಗ್
45 ರನ್ ಗಳಿಸುವಲ್ಲಿ 3 ವಿಕೆಟ್ ಕಳೆದುಕೊಂಡ ವಿಂಡೀಸ್‌ಗೆ ಹೆಟ್ಮೆಯರ್ ಮತ್ತು ನಾಯಕ ಶೈ ಹೋಪ್ ಆಸರೆಯಾದರು. 4ನೇ ವಿಕೆಟ್‌ಗೆ 43 ರನ್ ಕಲೆಹಾಕಿದರು. 88 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಉತ್ತಮ ಮೊತ್ತ ಕಲೆಹಾಕುವ ವಿಶ್ವಾಸದಲ್ಲಿ ಕೆರಿಬಿಯನ್ನರಿಗೆ ಜಡೇಜಾ ಮತ್ತು ಕುಲದೀಪ್ ಆಘಾತ ನೀಡಿದರು.
ಜಡೇಜಾ ಹೆಟ್ಮೆಯರ್ ವಿಕೆಟ್ ಪಡೆಯುವ ಮೂಲಕ ವಿಂಡೀಸ್ ಪತನ ಆರಂಭವಾಯಿತು. 18ನೇ ಓವರ್ ನಲ್ಲಿ ಜಡೇಜಾ ರೋವ್ಮನ್ ಪೋವೆಲ್ ಮತ್ತು ರೊಮಾರಿಯೋ ಶೆಫರ್ಡ್ ವಿಕೆಟ್ ಪಡೆದರು. ನಂತರ ಕುಲದೀಪ್ ಯಾದವ್ ಉಳಿದ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ವಿಂಡೀಸ್ ತಂಡವನ್ನು ಆಲೌಟ್ ಮಾಡಿದರು.
ಇಶಾನ್ ಕಿಶನ್ ಅರ್ಧಶತಕ
ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ಬ್ಯಾಟಿಂಗ್‌ನಲ್ಲಿ ಪ್ರಯೋಗಕ್ಕೆ ಮುಂದಾಯಿತು. ನಾಯಕ ರೋಹಿತ್ ಶರ್ಮಾ ಬದಲಾಗಿ ವಿಕೆಟ್ ಕೀಪರ್ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದರು. ಗಿಲ್ 7 ರನ್ ಗಳಿಸಿ ಔಟಾದರೆ ಇಶಾನ್ ಕಿಶನ್ ಸಿಕ್ಕ ಅವಕಾಶ ಬಳಸಿಕೊಂಡು ಅರ್ಧಶತಕ ಗಳಿಸಿ ಮಿಂಚಿದರು.
ಸೂರ್ಯಕುಮಾರ್ ಯಾದವ್ 19, ಹಾರ್ದಿಕ್ ಪಾಂಡ್ಯ 5, ರವೀಂದ್ರ ಜಡೇಜಾ ಅಜೇಯ 16, ಶಾರ್ದೂಲ್ ಠಾಕೂರ್ 1 ರನ್ ಗಳಿಸಿದರೆ, ರೋಹಿತ್ ಶರ್ಮಾ ಅಜೇಯ 12 ರನ್ ಗಳಿಸಿದರು. ಇಶಾನ್ ಕಿಶನ್ ಮಾತ್ರ 46 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ಸಹಿತ 52 ರನ್ ಗಳಿಸಿದರು.
ಏಕದಿನ ವಿಶ್ವಕಪ್‌ಗೆ ತಂಡವನ್ನು ಅಂತಿಮಗೊಳಿಸುವ ದೃಷ್ಟಿಯಿಂದ ಹೊಸಬರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಲಾಯಿತು. ಕೊಹ್ಲಿ ಬ್ಯಾಟಿಂಗ್‌ಗೆ ಇಳಿಯಲೇ ಇಲ್ಲ ಎನ್ನುವುದು ವಿಶೇಷ. ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ ಎರಡನೇ ಪಂದ್ಯವನ್ನು ಜುಲೈ 28ರಂದು ಆಡಲಿದೆ.












Click it and Unblock the Notifications