India vs Australia: ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಭಾರತ?
ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ಆಘಾತ ನೀಡಿದೆ. ಅಫ್ಘಾನಿಸ್ತಾನ ವಿರುದ್ಧ ಸೋತ ಆಸ್ಟ್ರೇಲಿಯಾವನ್ನು ಟಿ20 ವಿಶ್ವಕಪ್‌ನಿಂದಲೇ ಹೊರ ಹಾಕುವ ಅವಕಾಶ ಈಗ ಭಾರತಕ್ಕೆ ಸಿಕ್ಕಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಪಂದ್ಯ ಈಗ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ವಿಶೇಷವಾಗಿ ಆಸ್ಟ್ರೇಲಿಯಾ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಪಂದ್ಯವು ಮಿಚೆಲ್ ಮಾರ್ಷ್ ತಂಡಕ್ಕೆ ನಾಕ್ ಔಟ್ ಪಂದ್ಯವಾಗಿದೆ.

ಸೋತರೆ ವಿಶ್ವಕಪ್‌ನಿಂದಲೇ ಹೊರಕ್ಕೆ?
ಸೂಪರ್ 8 ಹಂತದಲ್ಲಿ ಆಸ್ಟ್ರೇಲಿಯಾ ಬಾಂಗ್ಲಾದೇಶದ ವಿರುದ್ಧ ಗೆದ್ದು 2 ಅಂಕ ಪಡೆದುಕೊಂಡಿತ್ತು, ಈಗ ಅಫ್ಘಾನಿಸ್ತಾನದ ವಿರುದ್ಧ ಸೋತಿದೆ. ಅಫ್ಘಾನಿಸ್ತಾನ ಭಾರತದ ವಿರುದ್ಧ ಸೋತು ಆಸ್ಟ್ರೇಲಿಯಾ ವಿರುದ್ಧ ಗೆದ್ದು 2 ಅಂಕ ಗಳಿಸಿದೆ.
ಭಾರತ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರನ್‌ರೇಟ್ ಉತ್ತಮವಾಗಿರುವ ಕಾರಣ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಅಫ್ಘಾನಿಸ್ತಾನ ಮೂರನೇ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ ಮುಂದಿನ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ. ಅಫ್ಘಾನಿಸ್ತಾನ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಒಂದು ವೇಳೆ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆದ್ದು, ಅಫ್ಘಾನಿಸ್ತಾನ ಬಾಂಗ್ಲಾದೇಶದ ವಿರುದ್ಧ ಗೆದ್ದರೆ ಆಸ್ಟ್ರೇಲಿಯಾ ಟೂರ್ನಿಯಿಂದಲೇ ಹೊರಬೀಳಲಿದ್ದು, ಭಾರತ ಮತ್ತು ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಲಿವೆ.
ಭಾರತದ ವಿರುದ್ಧ ಆಸ್ಟ್ರೇಲಿಯಾ ದೊಡ್ಡ ಅಂತರದಲ್ಲಿ ಸೋತು, ಅಫ್ಘಾನಿಸ್ತಾನ ಬಾಂಗ್ಲಾದೇಶದ ವಿರುದ್ಧ ಕಡಿಮೆ ಅಂತರದಲ್ಲಿ ಸೋತರೆ, ರನ್‌ರೇಟ್ ಏನಾದರೂ ಆಸ್ಟ್ರೇಲಿಯಾಗಿಂತ ಉತ್ತಮವಾಗಿದ್ದರೆ ಆಗಲೂ ಆಸ್ಟ್ರೇಲಿಯಾ ವಿಶ್ವಕಪ್‌ನಿಂದ ಹೊರಬೀಳುತ್ತದೆ.
ಏಕದಿನ ವಿಶ್ವಕಪ್‌ನಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋಲುವ ಹಂತದಲ್ಲಿ ಆಸ್ಟ್ರೇಲಿಯಾ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ದ್ವಿಶತಕದ ನೆರವಿನಿಂದ ಗೆಲುವು ಸಾಧಿಸಿತ್ತು. ಅಂದಿನ ಸೋಲಿಗೆ ಇಂದು ಅಫ್ಘಾನಿಸ್ತಾನ ಸೇಡು ತೀರಿಸಿಕೊಂಡಿದೆ.
ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ್ದ ಭಾರತಕ್ಕೆ ಈಗ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ದೊಡ್ಡ ಅಂತರದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ವಿಶ್ವಕಪ್‌ನಿಂದಲೇ ಹೊರದಬ್ಬುವ ಅವಕಾಶ ಇದೆ.
ಜೂನ್ 24ರಂದು ಸೇಂಟ್ ಲೂಸಿಯಾ ಡರೇನ್ ಸಾಮಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಆಸ್ಟ್ರೇಲಿಯಾ ಸೆಣೆಸಲಿದೆ.
ಗ್ರೂಪ್ 2ರಲ್ಲಿ ಕೂಡ ಸೆಮಿಫೈನಲ್ ಪ್ರವೇಶಿಸಲು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ದಕ್ಷಿಣ ಆಫ್ರಿಕಾ ಎರಡು ಪಂದ್ಯ ಗೆದ್ದಿದ್ದು ಮೊದಲ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಲಾ 2 ಅಂಕಗಳನ್ನು ಪಡೆದಿವೆ. ವೆಸ್ಟ್ ಇಂಡೀಸ್ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದು, ಇಂಗ್ಲೆಂಡ್ ಯುಎಸ್‌ಎ ವಿರುದ್ಧ ಸೆಣೆಸಲಿದೆ.
ವೆಸ್ಟ್ ಇಂಡೀಸ್ ಏನಾದರೂ ದೊಡ್ಡ ಅಂತರದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದರೆ, ಇಂಗ್ಲೆಂಡ್ ಯುಎಸ್‌ಎ ತಂಡವನ್ನು ಸೋಲಿಸಿದರೆ, ಆಗ ದಕ್ಷಿಣ ಆಫ್ರಿಕಾವೇ ವಿಶ್ವಕಪ್ ರೇಸ್‌ನಿಂದ ಹೊರಬೀಳಿದ್ದು, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಸೆಮಿಫೈನಲ್ ತಲುಪಲಿವೆ.












Click it and Unblock the Notifications