IND vs NZ: ವಿರಾಟ್ ಕೊಹ್ಲಿ ಅಲ್ಲ ಈ ಆಟಗಾರನೇ ನ್ಯೂಜಿಲೆಂಡ್‌ಗೆ ದೊಡ್ಡ ತಲೆನೋವು!
ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್‌ಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 9ರಂದು ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣೆಸಲಿವೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಈಗಾಗಲೇ ಭಾರತ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದರೂ ಫೈನಲ್‌ನಲ್ಲಿ ಹಗುರವಾಗಿ ಪರಿಗಣಿಸುವಂತೆಯೇ ಇಲ್ಲ.
ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ 50 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಸಹಕಾರಿಯಾದ ಪಿಚ್‌ನಲ್ಲು ನ್ಯೂಜಿಲೆಂಡ್ ಬೌಲರ್ ಗಳನ್ನು ದಕ್ಷಿಣ ಆಫ್ರಿಕಾ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದ್ದರು. ಲೀಗ್ ಹಂತದಲ್ಲಿ ದುಬೈನಲ್ಲಿ ಆಡಿರುವ ನ್ಯೂಜಿಲೆಂಡ್, ಇದೀಗ ಫೈನಲ್‌ನಲ್ಲಿ ಹೆಚ್ಚಿನ ಆತ್ಮವಿಶ್ವಾಸದಿಂದಲೇ ಭಾರತದ ವಿರುದ್ಧ ಕಣಕ್ಕಿಳಿಯಲಿದೆ.

ನ್ಯೂಜಿಲೆಂಡ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್‌ನ ಬಲಾಬಲದ ಬಗ್ಗೆ ಭಾರತ ತಂಡಕ್ಕೆ ಮಾಹಿತಿ ಇದ್ದು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವುದು ರೋಹಿತ್ ಶರ್ಮಾ ಪಡೆಗೆ ಸವಾಲಾಗಿದೆ. ಈ ಬೆನ್ನಲ್ಲೇ ನ್ಯೂಜಿಲೆಂಡ್‌ಗೆ ಭಾರತ ತಂಡದ ಆ ಆಟಗಾರ ದೊಡ್ಡ ತಲೆನೋವಾಗಿದ್ದಾರೆ.
ನ್ಯೂಜಿಲೆಂಡ್‌ಗೆ ಕಾಡುತ್ತಿದ್ದೆ ಚಕ್ರವರ್ತಿ ಭಯ!
ಭಾರತ ತಂಡದ ಮಿಸ್ಟರಿ ಸ್ಪಿನ್ನರ್ ಎಂದೇ ಹೆಸರಾಗಿರುವ ವರುಣ್ ಚಕ್ರವರ್ತಿ ಈಗ ನ್ಯೂಜಿಲೆಂಡ್‌ಗೆ ತಲೆನೋವಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಅವಕಾಶ ಪಡೆದ ವರುಣ್ ಚಕ್ರವರ್ತಿ ಉತ್ತಮ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಭಾರತ ತಂಡದಲ್ಲಿ ಅವಕಾಶ ಪಡೆದರು. ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟು ವರುಣ್ ಚಕ್ರವರ್ತಿ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು.
ಲೀಗ್ ಹಂತದಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಹೊರಗುಳಿದಿದ್ದ ಅವರು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಅದೇ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ವಿರುದ್ಧದ ಗೆಲುವಿನಲ್ಲಿ ಸಹಕಾರಿಯಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಟ್ರಾವಿಸ್ ಹೆಡ್ ವಿಕೆಟ್ ಪಡೆದು ಮಿಂಚಿದ್ದರು.
ಅದೇ ನಮಗೆ ಸವಾಲು ಎಂದ ನ್ಯೂಜಿಲೆಂಡ್ ಕೋಚ್!
ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಎದುರಿಸಲು ಸಜ್ಜಾಗುತ್ತಿರುವ ನ್ಯೂಜಿಲೆಂಡ್‌ಗೆ ವರುಣ್ ಚಕ್ರವರ್ತಿ ಎದುರಿಸುವುದು ಹೇಗೆ ಎಂದು ಸಿಕ್ಕಾಪಟ್ಟೆ ತಲೆನೋವಾಗಿದೆ. ನ್ಯೂಜಿಲೆಂಡ್‌ನ ಮುಖ್ಯ ಕೋಚ್ ಗ್ಯಾರಿ ಸ್ಟೀಡ್ ಅವರೇ ವರುಣ್ ಚಕ್ರವರ್ತಿ ಅಪಾಯಕಾರಿ ಎಂದು ಒಪ್ಪಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ಯಾರಿ ಸ್ಟೀಡ್, ಭಾರತದ ವಿರುದ್ಧ ಹೇಗೆ ಆಡಬೇಕು ಎಂದು ಯೋಜಿಸಲಾಗುತ್ತಿದೆ. ನಮ್ಮ ತಂಡದಲ್ಲೂ ನಾಲ್ಕು ಜನ ಸ್ಪಿನ್ನರ್ ಇದ್ದಾರೆ. ತಂಡದಲ್ಲಿ ಸಮತೋಲನ ಇದೆ. ಭಾರತದ ಸ್ಪಿನ್ನರ್ ಗಳು ಕೂಡ ಉತ್ತಮವಾಗಿದ್ದಾರೆ. ನಮ್ಮ ಪ್ಲಾನ್ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಅವರಿಗೆ ಒಂದು ದಿನ ಉತ್ತಮವಾಗಿಲ್ಲದೇ ಇದ್ದರೆ ನಮಗೆ ಅನುಕೂಲವಾಗಬಹುದು ಎಂದು ಹೇಳಿದರು.
ಲೀಗ್ ಪಂದ್ಯದಲ್ಲಿ ವರುಣ್ ಚಕ್ರವರ್ತಿ ನ್ಯೂಜಿಲೆಂಡ್ ಸೋಲಿಗೆ ಕಾರಣವಾಗಿದ್ದರ ಬಗ್ಗೆ ಮಾತನಾಡಿದ ಅವರು, ದುಬೈನ ಪಿಚ್‌ನಲ್ಲಿ ವರುಣ್ ಚಕ್ರವರ್ತಿ ನಮಗೆ ದೊಡ್ಡ ಸವಾಲಾಗಬಹುದು ಎಂದರು. ವರುಣ್ ಚಕ್ರವರ್ತಿ ಕ್ಲಾಸ್ ಬೌಲರ್, ಹಗಲು ವೇಳೆಯಲ್ಲಿ ಅವರ ಬೌಲಿಂಗ್ ಅನ್ನು ಅರಿಯುವುದು ಸುಲಭ ಎನಿಸುತ್ತದೆ. ಅವರು ಕಳೆದ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಫೈನಲ್‌ನಲ್ಲಿ ಅವರನ್ನು ಎದುರಿಸುವುದೇ ನಮಗೆ ದೊಡ್ಡ ಸವಾಲು, ಅವರನ್ನು ಎದುರಿಸುವ ಬಗ್ಗೆ ನಾವು ಯೋಜನೆ ಮಾಡುತ್ತೇವೆ ಎಂದು ಹೇಳಿದರು.












Click it and Unblock the Notifications