India vs Sri Lanka: ಸೂರ್ಯ-ರಿಂಕು ಬೌಲಿಂಗ್ ಮ್ಯಾಜಿಕ್; ಸೂಪರ್ ಓವರ್ನಲ್ಲಿ ಗೆದ್ದ ಭಾರತ
ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಭಾರತ ಶ್ರೀಲಂಕಾ ವಿರುದ್ಧ ಸೂಪರ್ ಓವರ್ ನಲ್ಲಿ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತು. ಶುಭಮನ್ ಗಿಲ್ 39, ರಿಯಾನ್ ಪರಾಗ್ 26 ರನ್, ವಾಷಿಂಗ್ಟನ್ ಸುಂದರ್ 25 ರನ್ ಗಳಿಸಿದರು.

138 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭವನ್ನೇ ಪಡೆಯಿತು. ಪಾಥುಮ್ ನಿಸಂಕ ಮತ್ತು ಕುಶಾಲ್ ಮೆಂಡಿಸ್ ಮೊದಲ ವಿಕೆಟ್‌ಗೆ 58 ರನ್ ಕಲೆಹಾಕಿದರು. ಬಳಿಕ ಕುಶಾಲ್ ಮೆಂಡಿಸ್ ಮತ್ತು ಕುಶಾಲ್ ಪೆರೇರಾ ಜೋಡಿ ಎರಡನೇ ವಿಕೆಟ್‌ಗೆ 52 ರನ್ ಕಲೆಹಾಕಿದರು. 15 ಓವರ್ ಗಳಲ್ಲಿ110 ರನ್‌ಗಳಿಸಿದ್ದ ಶ್ರೀಲಂಕಾ ಸುಲಭ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿತ್ತು.
ಆದರೆ ವಾಷಿಂಗ್ಟನ್ ಸುಂದರ್ ನಾಯಕ ಚರಿತ್ ಅಸಲಂಕ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಆದರೂ ಕೊನೆಯ ಎರಡು ಓವರ್ ನಲ್ಲಿ ಶ್ರೀಲಂಕಾ ಗೆಲವಿಗೆ ಕೇವಲ 9 ರನ್ ಬೇಕಿತ್ತು. ಆದರೆ 19ನೇ ಓವರ್ ಬೌಲಿಂಗ್ ಮಾಡಿದ ರಿಂಕು ಸಿಂಗ್ ಕೇವಲ 3 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.
ಕೊನೆಯ ಓವರ್ ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಮಾಡಬೇಕಿತ್ತು ಆದರೆ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಾಯಿಸಿದ ಸೂರ್ಯಕುಮಾರ್ ಯಾದವ್ ತಾವೇ ಬೌಲಿಂಗ್ ದಾಳಿಗೆ ಇಳಿದರು. 5 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದ ಅವರು ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾದರು.
ಸೂಪರ್ ಓವರ್ ನಲ್ಲಿ ಗೆಲುವು
ಸೂಪರ್ ಓವರ್ ನಲ್ಲಿ ಶ್ರೀಲಂಕಾ 2 ವಿಕೆಟ್ ಕಳೆದುಕೊಂಡು 2 ರನ್ ಗಳಿಸುವ ಮೂಲಕ ಭಾರಕ್ಕೆ ಕೇವಲ 3 ರನ್‌ಗಳ ಗುರಿ ನೀಡಿತು. ಸೂರ್ಯಕುಮಾರ್ ಯಾದವ್ ಸೂಪರ್ ಓವರ್ ನ ಮೊದಲ ಎಸೆತದಲ್ಲೇ ಬೌಂಡರಿ ಗಳಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.
ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದೆ. ನಾಯಕನಾಗಿ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಆಗಿ ಗೌತಮ್ ಗಂಭೀರ್ ಅವರಿಗೆ ಇದು ಮರೆಯಲಾಗದ ಸರಣಿಯಾಗಿದೆ. ಅದರಲ್ಲೂ ಟಿ20 ಸರಣಿಯ ಕೊನೆಯ ರೋಚಕ ಪಂದ್ಯ ಮಾತ್ರ ಬಹುಕಾಲ ನೆನಪಿನಲ್ಲಿ ಉಳಿಯಲಿದೆ.












Click it and Unblock the Notifications