Gautam Gambhir: ಭಾರತ ತಂಡದ ಕೆಟ್ಟ ಕೋಚ್! ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳ ಅಸಮಾಧಾನ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡದ ಪ್ರದರ್ಶನ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. 2015ರಿಂದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನೇ ಸೋಲದ ಭಾರತ ಈ ಬಾರಿ ಸರಣಿ ಸೋಲಿನ ಭೀತಿಯಲ್ಲಿದೆ. ಮಾಜಿ ಕ್ರಿಕೆಟಿಗರು ಕೂಡ ಭಾರತ ತಂಡದ ಪ್ರದರ್ಶನಕ್ಕೆ ಕಿಡಿ ಕಾರಿದ್ದಾರೆ. ಮೊದಲು ಆಟಗಾರರ ಮೇಲಿದ್ದ ಕೋಪ ಈಗ ಕೋಚ್ ಗೌತಮ್ ಗಂಭೀರ್ ಮೇಲೆ ತಿರುಗಿದೆ.
2024ರ ಐಪಿಎಲ್‌ನಲ್ಲಿ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್ ಚಾಂಪಿಯನ್ ಆಗಿತ್ತು. ಇದನ್ನೇ ಮಾನದಂಡವನ್ನಾಗಿಟ್ಟುಕೊಂಡು ಅವರನ್ನು ಭಾರತ ತಂಡದ ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು. ಗೌತಮ್ ಗಂಭೀರ್ ಕೋಚ್ ಆದ ಬಳಿಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿತ್ತು. ಭಾರತ ತಂಡ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿದೆ, ಅವರ ಅವಧಿಯಲ್ಲಿ ಮತ್ತಷ್ಟು ಐಸಿಸಿ ಟ್ರೋಫಿಗಳನ್ನು ಗೆಲ್ಲಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು.

ಆದರೆ ಗೌತಮ್ ಗಂಭೀರ ಕೋಚ್ ಆದ ಬಳಿಕ ಭಾರತ ತಂಡಕ್ಕೆ ಗೆಲುವಿನ ಖುಷಿಗಿಂತ ಸೋಲಿನ ಅವಮಾನವೇ ಹೆಚ್ಚಾಗಿ ಸಿಕ್ಕಿದೆ. ಗಂಭೀರ್ ಕೋಚ್ ಆದ ಬಳಿಕ ಆಡಿದ ಮೊದಲ ಏಕದಿನ ಸರಣಿಯಲ್ಲೇ ಭಾರತ ಸೋಲನುಭವಿಸಿತು. ಎರಡು ದಶಕಗಳ ಬಳಿಕ ಶ್ರೀಲಂಕಾ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದು ಬೀಗಿತ್ತು. ಇದು ಗಂಭೀರ್ ಅವಧಿಯಲ್ಲಿ ಭಾರತ ತಂಡದ ಅಭಿಮಾನಿಗಳಿಗೆ ಸಿಕ್ಕ ಮೊದಲ ಶಾಕ್.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತ ಮೂರನೇ ಬಾರಿ ಫೈನಲ್ ಆಡಲಿದೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಸೋತು ಭಾರತಕ್ಕೆ ಬಂದ ನ್ಯೂಜಿಲೆಂಡ್ ಮೇಲೆ ಹೆಚ್ಚಿನ ನಿರೀಕ್ಷೆಗಳು ಇರಲಿಲ್ಲ, ಭಾರತ ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲಿದೆ ಎಂದೇ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ನ್ಯೂಜಿಲೆಂಡ್ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿತು. ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇದು ಅವಮಾನಕರ ಸರಣಿ ಸೋಲು ಎಂದು ಹೇಳಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಆಲೌಟ್ ಆಗಿದ್ದು ಮತ್ತೊಂದು ಆಘಾತ ನೀಡಿತ್ತು. ಕಳೆದ 12 ವರ್ಷಗಳಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಸೋಲದೆ ಮೆರೆಯುತ್ತಿದ್ದ ಭಾರತ ತಂಡ ತವರಿನಲ್ಲೇ ಸರಣಿ ಸೋಲಿನ ಅವಮಾನ ಅನುಭವಿಸಿತು.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲನೇ ಪಂದ್ಯ ಗೆದ್ದ ಭಾರತ, ಬಳಿಕ ನಡೆದ ಮೂರು ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಬುಮ್ರಾ ಇಲ್ಲದೇ ಇದ್ದಿದ್ದರೆ ಭಾರತದ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿರುತ್ತಿತ್ತು. ಆಸ್ಟ್ರೇಲಿಯಾ ವಿರುದ್ಧ 2 ಟೆಸ್ಟ್ ಸೋತಿರುವ ಭಾರತ ಸರಣಿಯನ್ನು ಸಮಬಲ ಮಾಡಿಕೊಳ್ಳುವ ಕೊನೆಯ ಅವಕಾಶ ಹೊಂದಿದೆ. ಕೊನೆಯ ಪಂದ್ಯ ಗೆದ್ದು ಅದೃಷ್ಟ ಕೈಹಿಡಿದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲಿದೆ. ಸಿಡ್ನಿ ಟೆಸ್ಟ್‌ನಲ್ಲಿ ಸೋತರೆ ಭಾರತದ ಫೈನಲ್ ಕನಸು ಅಲ್ಲಿಗೆ ಮುಗಿಯಲಿದೆ.
ಕೋಚ್ ಗಂಭೀರ್ ವಿರುದ್ಧ ಭಾರಿ ಅಸಮಾಧಾನ ವ್ಯಕ್ತವಾಗುತ್ತಿದ್ದು, ಅಶ್ವಿನ್ ಮಧ್ಯದಲ್ಲೇ ವಿದಾಯ ಹೇಳಿದ್ದು ಕೂಡ ಹಲವು ಪ್ರಶ್ನೆಗಳನ್ನು ಮೂಡಿಸಿದೆ. ತಂಡದಲ್ಲಿ ಒಗ್ಗಟ್ಟು ಮೂಡಿಸಲು ಗಂಭೀರ್ ವಿಫಲವಾಗಿದ್ದಾರೆ ಎನ್ನಲಾಗಿದ್ದು ಕೋಚ್ ಬದಲಾವಣೆ ಕೂಗು ಕೇಳಿಬಂದಿದೆ.












Click it and Unblock the Notifications