ನಮ್ಮ ವಾಯುನೆಲೆಗಳ ಮೇಲೆ ಭಾರತ ಬ್ರಹ್ಮೋಸ್ ದಾಳಿ ನಡೆಸಿದೆ; ಕೊನೆಗೂ ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ
ಮೇ 9-10ರ ಮಧ್ಯರಾತ್ರಿ ಭಾರತ ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸೇನಾ ನೆಲೆಗಳ ಮೇಲೆ ಬ್ರಹ್ಮೋಸ್ ಕ್ಷಿಪಣಿಗಳಿಂದ ದಾಳಿ ಮಾಡಿದ್ದು ತಮ್ಮ ಸೇನೆಯು ಅನಿರೀಕ್ಷಿತವಾಗಿ ಸಿಕ್ಕಿಹಾಕಿಕೊಂಡಿತು ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೊನೆಗೂ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದ ಪರವಾಗಿ ನಿಂತ ಕೆಲವೇ ರಾಷ್ಟ್ರಗಳಲ್ಲಿ ಒಂದಾದ ಅಜೆರ್ಬೈಜಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷರೀಫ್, ಅಸಿಮ್ ಮುನೀರ್ ನೇತೃತ್ವದ ಸೇನೆಯು ಮೇ 10 ರಂದು ಬೆಳಗಿನ ಪ್ರಾರ್ಥನೆಯ ನಂತರ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿತ್ತು ಎಂದು ಹೇಳಿದರು.

ಬೆಳಗಿನ ಜಾವಕ್ಕೂ ಮುಂಚೆಯೇ, ಪಾಕಿಸ್ತಾನದ ವಿವಿಧ ಪ್ರಾಂತ್ಯಗಳ ಮೇಲೆ ದೀರ್ಘ-ಶ್ರೇಣಿಯ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳ ಮಳೆ ಸುರಿಯಿತು ಎಂದು ಪ್ರಧಾನಿ ಹೇಳಿದರು. ದಾಳಿಯ ಬಗ್ಗೆ ನಮಗೆ ಮಾಹಿತಿ ನೀಡಲಾಗಿತ್ತು ಎಂದು ಷರೀಫ್ ಹೇಳಿದ್ದಾರೆ. ಅಸಿಮ್ ಮುನೀರ್ ಅವರಿಗೆ ಈಗ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಲಾಗಿದೆ.
ದಾಳಿಗೆ ಮುನ್ನವೇ ಪ್ರತಿದಾಳಿ
ಮೇ 9-10ರ ರಾತ್ರಿ, ನಾವು ಭಾರತದ ಆಕ್ರಮಣಕ್ಕೆ ಕ್ರಮಬದ್ಧವಾಗಿ ಪ್ರತಿಕ್ರಿಯಿಸಲು ನಿರ್ಧರಿಸಿದ್ದೆವು. ಫಜ್ರ್ ಪ್ರಾರ್ಥನೆಯ ನಂತರ ಬೆಳಿಗ್ಗೆ 4.30 ಕ್ಕೆ ಪಾಠ ಕಲಿಸಲು ನಮ್ಮ ಸಶಸ್ತ್ರ ಪಡೆಗಳು ಸಿದ್ಧವಾಗಿದ್ದವು. ಆದರೆ ಸಮಯ ಬರುವ ಮೊದಲೇ, ಭಾರತ ಮತ್ತೊಮ್ಮೆ ಬ್ರಹ್ಮೋಸ್ ಬಳಸಿ ಕ್ಷಿಪಣಿ ದಾಳಿ ನಡೆಸಿತು, ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮಾಡಿತ್ತು ಎಂದು ಶರೀಫ್ ಲಾಚಿನ್‌ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.
ಅಸಿಮ್ ಮುನೀರ್ ಅವರ ಮುಂದೆಯೇ ಪಾಕಿಸ್ತಾನದ ಪ್ರಧಾನಿ ಭಾರತದ ಕ್ಷಿಪಣಿ ದಾಳಿಯನ್ನು ಒಪ್ಪಿಕೊಂಡಿದ್ದರು. ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಗುರಿಯಾಗಿಸಿಕೊಂಡ 11 ಮಿಲಿಟರಿ ತಾಣಗಳಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯೂ ಸೇರಿತ್ತು.
ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ಸೇನಾ ಪ್ರಧಾನ ಕಚೇರಿಯಿಂದ ಸ್ವಲ್ಪ ದೂರದಲ್ಲಿರುವ ವಾಯುನೆಲೆಯು ಲಾಕ್ಹೀಡ್ ಸಿ-130 ಹರ್ಕ್ಯುಲಸ್ ಮತ್ತು ಇಲ್ಯುಶಿನ್ ಇಲ್-78 ಇಂಧನ ತುಂಬಿಸುವ ವಿಮಾನಗಳಂತಹ ಉನ್ನತ ಶ್ರೇಣಿಯ ಮಿಲಿಟರಿ ವಿಮಾನಗಳನ್ನು ಹೊಂದಿದೆ. ಎರಡು ಮಿಲಿಟರಿ ಸಾರಿಗೆ ವಾಹನಗಳು ಹಾನಿಯಾಗಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ.
ನೂರ್ ಖಾನ್ ಹೊರತುಪಡಿಸಿ, ಭಾರತವು ರಫಿಕಿ, ಮುರಿಯ್, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್‌ನಲ್ಲಿರುವ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ದಾಳಿ ಮಾಡಿತು. ಸ್ಕಾರ್ಡು, ಭೋಲಾರಿ, ಜಕೋಬಾಬಾದ್ ಮತ್ತು ಸರ್ಗೋಧಾದಲ್ಲಿನ ವಾಯು ನೆಲೆಗಳಿಗೂ ಕೂಡ ವ್ಯಾಪಕ ಹಾನಿ ಮಾಡಿದೆ.












Click it and Unblock the Notifications