India vs New Zealand: ನ್ಯೂಜಿಲೆಂಡ್ ಸ್ಪಿನ್ ಬಲೆಗೆ ಬಿದ್ದ ಭಾರತ; ಶುರುವಾಯ್ತು ಸೋಲಿನ ಭೀತಿ
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೂಡ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 156 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ 103 ರನ್‌ಗಳ ಹಿನ್ನಡೆ ಅನುಭವಿಸಿದ್ದು, ಮತ್ತೊಂದು ಸೋಲಿನ ಸುಳಿಯಲ್ಲಿ ಸಿಲುಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಭಾರತದ ಸ್ಪಿನ್ ದಾಳಿಗೆ ಸಿಲುಕಿ 259 ರನ್‌ಗಳಿಗೆ ಆಲೌಟ್ ಆಗಿತ್ತು, ವಾಷಿಂಗ್ಟನ್ ಸುಂದರ್ 7 ವಿಕೆಟ್ ಪಡೆದಿದ್ದರೆ, ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರು. ರಚಿನ್ ರವೀಂದ್ರ 65 ರನ್, ಡಿವೋನ್ ಕಾನ್ವೆ 76 ರನ್ ಗಳಿಸಿ ನ್ಯೂಜಿಲೆಂಡ್ ತಂಡಕ್ಕೆ ನೆರವಾಗಿದ್ದರು.

ಭಾರತದ ಬ್ಯಾಟಿಂಗ್ ವೈಫಲ್ಯ
ನ್ಯೂಜಿಲೆಂಡ್ 259 ರನ್‌ಗಳಿಗೆ ಆಲೌಟ್ ಆದ ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ ರನ್ ಗಳಿಸದೇ ಔಟಾದರು. ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಜೈಸ್ವಾಲ್ 30 ರನ್ ಗಳಿಸಿದರು, ಗಿಲ್ 30 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ 1 ರನ್ ಗಳಿಸಿ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ರಿಷಬ್ ಪಂತ್ 18 ರನ್ ಗಳಿಸಿದರೆ, ಸರ್ಫರಾಜ್ ಖಾನ್ 11 ರನ್ ಗಳಿಸಿದರು. ರವೀಂದ್ರ ಜಡೇಜಾ 38 ರನ್ ಗಳಿಸಿದರು. ರವಿಚಂದ್ರನ್ ಅಶ್ವಿನ್ 4 ರನ್, ವಾಷಿಂಗ್ಟನ್ ಸುಂದರ್ ಅಜೇಯ 18 ರನ್, ಆಕಾಶ್ ದೀಪ್ 6 ರನ್ ಗಳಿಸಿದರು. ನ್ಯೂಜಿಲೆಂಡ್ ಪರವಾಗಿ ಮಿಚೆಲ್ ಸ್ಯಾಂಟ್ನರ್ 7 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಗ್ಲೆನ್ ಫಿಲಿಪ್ಸ್ 2 ವಿಕೆಟ್ ಪಡೆದರೆ, ಟಿಮ್ ಸೌಥಿ 1 ವಿಕೆಟ್ ಪಡೆದರು.
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಈಗಾಗಲೇ ಸೋಲು ಕಂಡಿರುವ ಭಾರತ ಈಗ ಎರಡನೇ ಪಂದ್ಯದಲ್ಲಿ ಕುಡ ಸೋಲಿನ ಸುಳಿಗೆ ಸಿಲುಕಿದೆ. ನ್ಯೂಜಿಲೆಂಡ್ ಈ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು ಪುಣೆ ಟೆಸ್ಟ್ ಗೆದ್ದರೆ ಸರಣಿ ಕೈವಶ ಮಾಡಿಕೊಳ್ಳಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಉಳಿಸಿಕೊಳ್ಳಬೇಕೆಂದರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದರೆ ಮಾತ್ರ ಭಾರತಕ್ಕೆ ಗೆಲುವು ಸುಲಭವಾಗುವ ಸಾಧ್ಯತೆ ಇದೆ.












Click it and Unblock the Notifications