Ind vs WI ODI : ಭಾರತದ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ
ಭಾರತದ ವಿರುದ್ಧದ ಏಕದಿನ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಹೆಸರಿಸಲಾಗಿದೆ. ಕ್ರಿಕೆಟ್ ವೆಸ್ಟ್ ಇಂಡೀಸ್ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶಿಮ್ರಾನ್ ಹೆಟ್ಮೆಯರ್ ತಂಡಕ್ಕೆ ಮರಳಿದ್ದು, ನಿಕೋಲಸ್ ಪೂರನ್ ತಂಡಕ್ಕೆ ಅಲಭ್ಯರಾಗಿದ್ದಾರೆ.
ಭಾರತ vs ವೆಸ್ಟ್ ಇಂಡೀಸ್ ಏಕದಿನ ಸರಣಿ ಜುಲೈ 27ರಿಂದ ಆರಂಭವಾಗಲಿದೆ. ಓಶೇನ್ ಥಾಮಸ್ ದೀರ್ಘಕಾಲದ ನಂತರ ತಂಡಕ್ಕೆ ವಾಪಸಾಗಿದ್ದಾರೆ, ಪ್ರಮುಖ ಆಲ್‌ರೌಂಡರ್ ಜೇಸನ್ ಹೋಲ್ಡರ್ ತಂಡಕ್ಕೆ ಆಯ್ಕೆಯಾಗಿಲ್ಲ.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಾಲ್ಕು ದಿನಗಳ ತರಬೇತಿ ಶಿಬಿರದ ನಂತರ ಕ್ರಿಕೆಟ್ ವೆಸ್ಟ್ ಇಂಡೀಸ್ ತಂಡವನ್ನು ಹೆಸರಿಸಿತು. 2022ರ ಆಗಸ್ಟ್‌ನಲ್ಲಿ ಹೆಟ್ಮೆಯರ್ ಕೊನೆಯದಾಗಿ ವೆಸ್ಟ್ ತಂಡಕ್ಕಾಗಿ ಆಡಿದ್ದರು. ಒಂದು ವರ್ಷದ ನಂತರ ಅವರು ತಂಡಕ್ಕೆ ಮರಳಿದ್ದಾರೆ. ವೇಗದ ಬೌಲರ್ ಜೇಡನ್ ಸೀಲ್ಸ್ ಮತ್ತು ಲೆಗ್ ಸ್ಪಿನ್ನರ್ ಯಾನಿಕ್ ಕ್ಯಾರಿಯಾ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡು ಫಿಟ್ ಆಗಿದ್ದು ತಂಡಕ್ಕೆ ವಾಪಸಾಗಿದ್ದಾರೆ. ಗುಡಾಕೇಶ್ ಮೋಟಿ ಕೂಡ ಗಾಯದಿಂದ ಚೇತರಿಸಿಕೊಂಡಿದ್ದು ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮುಖ್ಯ ಆಯ್ಕೆಗಾರ ಹೇಳಿದ್ದೇನು?
"ನಾವು ಒಶಾನೆ ಮತ್ತು ಶಿಮ್ರಾನ್ ಅವರನ್ನು ಮತ್ತೆ ತಂಡಕ್ಕೆ ಸ್ವಾಗತಿಸುತ್ತೇವೆ. ಇಬ್ಬರೂ ಈ ಮೊದಲು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ತಂಡಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ನಾವು ನಂಬುತ್ತೇವೆ. ಓಶಾನೆ ಹೊಸ ಬಾಲ್‌ನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್‌ಗೆ ಶಕ್ತಿ ತರುತ್ತಾರೆ, ಫಿನಿಶರ್ ಕೂಡ ಆಗಿದ್ದಾರೆ" ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಮುಖ್ಯ ಆಯ್ಕೆಗಾರ ಡೆಸ್ಮಂಡ್ ಹೇನ್ಸ್ ಹೇಳಿದ್ದಾರೆ.
ನಿಕೋಲಸ್ ಪೂರನ್ ಮತ್ತು ಜೇಸನ್ ಹೋಲ್ಡರ್ ಇಬ್ಬರೂ ಏಕದಿನ ಸರಣಿಯ ಆಯ್ಕೆಗೆ ಲಭ್ಯವಿಲ್ಲ ಎಂದು ಹೇಳಿದೆ. ಜೇಸನ್ ಹೋಲ್ಡರ್ ಭಾರತ ವಿರುದ್ಧದ ಎರಡು ಟೆಸ್ಟ್‌ಗಳಲ್ಲಿ ಕಾಣಿಸಿಕೊಂಡರು, ಆದರೆ ಏಕದಿನ ಪಂದ್ಯಗಳನ್ನು ಆಡುವುದಿಲ್ಲ. ನಿಕೋಲಸ್ ಪೂರನ್ ಸದ್ಯ ಯುಎಸ್‌ನಲ್ಲಿದ್ದು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ.
ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ನಂತರ ವೆಸ್ಟ್ ಇಂಡೀಸ್ ಆಡುತ್ತಿರುವ ಮೊದಲ ಏಕದಿನ ಸರಣಿ ಇದಾಗಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಟೆಸ್ಟ್ ಸರಣಿ ಗೆದ್ದಿರುವ ಭಾರತ ಏಕದಿನ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ:
ಶಾಯ್ ಹೋಪ್ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ), ಅಲಿಕ್ ಅಥಾನಾಜೆ, ಯಾನಿಕ್ ಕ್ಯಾರಿಯಾ, ಕೀಸಿ ಕಾರ್ಟಿ, ಡೊಮಿನಿಕ್ ಡ್ರೇಕ್ಸ್, ಶಿಮ್ರಾನ್ ಹೆಟ್ಮೆಯರ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಕೇಶ್ ಮೋಟಿ, ಜೇಡನ್ ಸಿನ್‌ಸ್, ರೊಮರಿಯೊ ಶೆಫರ್ಡ್, ಕೆವಿನ್ ಸಿನ್‌ಕ್ಲೈರ್, ಒಶಾನೆ ಥಾಮಸ್.
ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಯದೇವ್ ಉನಾದ್ಕತ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್.












Click it and Unblock the Notifications